ಬೆಂಗಳೂರು: ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ನಗರದ ಪೊಲೀಸರನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಮ್ಯಾನ್ ಪವರ್ ಕಡಿಮೆ ಇರುವುದರಿಂದ ರಸ್ತೆಗಿಳಿದು ವಾಹನಗಳ ತಪಾಸಣೆ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಇತ್ತ ಟ್ರಾಫಿಕ್ ಪೊಲೀಸರಿಲ್ಲ ಎಂದು ರೂಲ್ಸ್ ಬ್ರೇಕ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಪೊಲೀಸರ ಕಣ್ತಿಪ್ಪಿಸಿಕೊಂಡರೂ, ಸ್ವಯಂಚಾಲಿತ ಎಚ್‌ಡಿ ಕ್ಯಾಮೆರಾಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ನಗರದಲ್ಲಿ ಹೈ ಡೆಫಿನೇಷನ್ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುಕಮ್ಮಿ 4 ಸಾವಿರ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾದಲ್ಲಿ ಈಗಾಗಲೇ 18 ಲಕ್ಷದವರೆಗೂ ಟ್ರಾಫಿಕ್ ವಯೊಲೇಷನ್ ಕೇಸ್‌ಗಳು ದಾಖಲಾಗಿದೆ.
ಇನ್ನು ರೂಲ್ಸ್ ಬ್ರೇಕ್ ಮಾಡಿದವರು ದಂಡದ ಮೊತ್ತವನ್ನು ಕಟ್ಟುತ್ತಿಲ್ಲ. ಈಗಾಗಲೇ ರೂಲ್ಸ್ ಬ್ರೇಕ್ ಮಾಡಿರುವವರ ಮನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಲವು ಸವಾರರು ನೋಟಿಸ್‌ಗೂ ಕ್ಯಾರೆ ಎಂದಿಲ್ಲ. ಹೀಗಾಗಿ ಎಲೆಕ್ಷನ್ ಬಳಿಕ ಅತಿ ಹೆಚ್ಚು ರೂಲ್ಸ್ ಬ್ರೇಕ್ ಮಾಡಿರುವವರ ಮನೆಗೆ ಹೋಗಿ ದಂಡ ಕಟ್ಟಿಸಿಕೊಳ್ಳಲು ತಯಾರಿ ನಡೆದಿದೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ. ನಗರದ ಸಂಚಾರಿ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಹೊರತುಪಡಿಸಿ ಉಳಿದಂತೆ ಯಾವುದೇ ಸಂಚಾರಿ ಉಲ್ಲಂಘನೆಗಳಿದ್ದರೂ ಅವೆಲ್ಲವನ್ನೂ ಭಾಗಶಃ ಆನ್‌ಲೈನ್ ಮೂಲಕವೇ ನೋಡಿಕೊಳ್ಳುತ್ತಿದ್ದಾರೆ. ಸಿಗ್ನಲ್ ಜಂಪ್ ಮಾಡಿದರೂ, ಹೆಲ್ಮೆಟ್ ಹಾಕದಿದ್ದರೂ ಪೊಲೀಸರು ಹಿಡಿಯುತ್ತಿಲ್ಲ. ದಂಡವನ್ನೂ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಸಂಚಾರ ನಿಯಮ ಉಲ್ಲಂಘನೆ (traffic violation) ಮಾಡುತ್ತಿದ್ದರೆ ಎಚ್ಚರವಾಗಿರಿ, ಯಾಕೆಂದರೆ ದಂಡ ವಸೂಲಿಗಾಗಿ ಚುನಾವಣೆ ನಂತರ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರಬಹುದು.
ಒಂದು ಬಾರಿ ಸಂಚಾರಿ ನಿಯಮ ಉಲ್ಲಂಘನೆಯಾದರೆ ರಸ್ತೆಯುದ್ದಕ್ಕೂ ಸಿಗುವ ಕ್ಯಾಮೆರಾಗಳು ಕ್ಯಾಪ್ಚರ್ ಮಾಡುತ್ತವೆ. ಒಂದು ಸಲದ ತಪ್ಪಿಗೆ ಹತ್ತಾರು ಜಾಗದ ದಂಡಗಳನ್ನು ಕಟ್ಟಬೇಕಾಗುತ್ತದೆ. ಉದಾಹರಣೆಗೆ ಹೆಲ್ಮೆಟ್ ಇಲ್ಲದೆ ವಾಹನ ಓಡಿಸುತ್ತಿದ್ದರೆ, ಆತ ಎಲ್ಲೆಲ್ಲಿ ಹೋಗುತ್ತಾನೋ ಆ ಜಾಗದಲ್ಲಿರುವ ಕ್ಯಾಮೆರಾಗಳು ವಿತ್ ಔಟ್ ಹೆಲ್ಮೆಟ್ ಎಂದು ಕ್ಯಾಪ್ಚರ್ ಮಾಡುತ್ತದೆ. ಹೀಗಾಗಿ ಆತ ಹೆಲ್ಮೆಟ್ ಇಲ್ಲದೆ ಎಲ್ಲೆಲ್ಲಿ ಹೋಗುತ್ತಾನೋ ಅಲ್ಲೆಲ್ಲ ಫೈನ್ಗಳನ್ನು ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: Police Raid: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಮಾರಕಾಸ್ತ್ರಗಳ ವಶ; ಇದು ಎಲೆಕ್ಷನ್ ಎಫೆಕ್ಟ್
ಈ ಸಂಬಂಧ ಸಂಚಾರಿ ಪೊಲೀಸ್ ವಿಶೇಷ ಆಯುಕ್ತ ಸಲೀಂ ಪ್ರತಿಕ್ರಿಯಿಸಿದ್ದು, ನಗರದಲ್ಲಿ ಸುಮಾರು 3,500 ಕ್ಯಾಮೆರಾಗಳು ಕೆಲಸ ಮಾಡುತ್ತಿದ್ದು, ಪ್ರತಿನಿತ್ಯವೂ ಸಾವಿರಾರು ಕೇಸ್‌ಗಳು ರಿಜಿಸ್ಟರ್ ಆಗುತ್ತಿವೆ. ಯಾವ ಸವಾರ ರೂಲ್ಸ್ ಬ್ರೇಕ್ ಮಾಡುತ್ತಾರೋ ಅವರ ವಿರುದ್ಧ ಕೇಸ್ ದಾಖಲಾಗುತ್ತದೆ. ಪ್ರತಿ ಮೂವ್ಮೆಂಟ್ ಕ್ಯಾಮೆರಾದಲ್ಲಿ ಮಾನಿಟರಿಂಗ್ ಮಾಡಲಾಗುತ್ತಿದೆ. ಶೇ. 90ರಷ್ಟು ಕೇಸ್‌ಗಳನ್ನು ಕ್ಯಾಮೆರಾ ಮೂಲಕ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.