ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾಳೆ. ಈ ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ.
ಮೊಸಳೆ ಹೊಸಳ್ಳಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ (೧೬) ಕಾಲೇಜಿಗೆ ಹೋಗುವ ವೇಳೆ ದುರಂತ ಸಂಭವಿಸಿದೆ. ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ ಕಾಲೇಜಿಗೆ ಹೋಗುವ ವೇಳೆ ಅಂಕಪುರ ಗ್ರಾಮದ ಬಳಿ ರೈಲ್ವೆ ಹಳಿಯನ್ನು ದಾಟಿ ಹೋಗಬೇಕು. ರೈಲು ಹಳಿ ದಾಟಲು ಕಾಯುತ್ತಿದ್ದ ವೇಳೆ ಆಕೆ ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದು, ಆಕೆಯ ಮೇಲೆಯೇ ರೈಲು ಸಾಗಿ ಹೋಗಿದೆ.
ಈ ವಿದ್ಯಮಾನದಿಂದ ಬೇಸರಗೊಂಡ ಮತ್ತು ಆಕ್ರೋಶಿತರಾದ ಪ್ರೀತಿಯ ಸಂಬಂಧಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಸನ-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮೇಲು ಸೇತುವೆ ನಿರ್ಮಾಣಕ್ಕೆ ಆಗ್ರಹ
ಈ ಭಾಗದಲ್ಲಿ ರೈಲು ಹಳಿ ದಾಟಿ ಹೋಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಹಲವು ಬಾರಿ ಅನಾಹುತಗಳಾಗಿವೆ. ಇಲ್ಲೇ ಸಮೀಪದಲ್ಲೇ ಸಂತೆ ಮತ್ತು ಕಾಲೇಜುಗಳಿವೆ. ಆದರೂ ಕನಿಷ್ಠ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಸಂಬಂಧಿಕರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಬೇಕು. ರೈಲು ಹಳಿ ದಾಟಲು ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.