Site icon Vistara News

Train service in forest : ರೈಲುಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡು ಪ್ರಾಣಿಗಳು; ವೇಗ ತಗ್ಗಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ

train in forest

#image_title

ಬೆಂಗಳೂರು: ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೊಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ರಾತ್ರಿ ವೇಳೆ ರೈಲುಗಳ ವೇಗ ತಗ್ಗಿಸಲು ಆದೇಶ ಕೊಡಿ (Train service in forest) ಎಂದು ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ. ಇದು ಕಾಡು ಹಾದಿಯಾಗಿದ್ದು, ರಾತ್ರಿ ವೇಳೆ ಅನೇಕ ಪ್ರಾಣಿಗಳು ರೈಲಿನಡಿಗೆ ಬಿದ್ದು ಸಾಯುತ್ತಿವೆ ಎಂಬ ಕಾರಣಕ್ಕೆ ಈ ಮನವಿ ಮಾಡಲಾಗಿದೆ.

ಹೊಸಪೇಟೆ- ವಾಸ್ಕೋಡಗಾಮ ಮತ್ತು ಲೊಂಡಾ-ಮೀರಜ್ ರೈಲು ಮಾರ್ಗದಲ್ಲಿ ರಾತ್ರಿ ವೇಳೆ ರೈಲುಗಳ ಅಧಿಕ ವೇಗದ ಚಾಲನೆಯಿಂದ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇದರಿಂದ ವೇಗದ ಮಿತಿ ತಗ್ಗಿಸಲು ರೈಲ್ವೆ ಇಲಾಖೆಗೆ ನಿರ್ದೇಶಿಸಿ ಎಂದು ಪರಿಸರವಾದಿ ಗಿರಿಧರ್ ಕುಲಕರ್ಣಿ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಅರಣ್ಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ, ಬೆಳಗಾವಿ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರು ಅರ್ಜಿ ಕುರಿತು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿತು.

ಸುಪ್ರೀಂಕೋರ್ಟ್‌ ಕೂಡಾ ಹೇಳಿತ್ತು

ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರೈಲು ಮಾರ್ಗಗಳಲ್ಲಿ ವೇಗದ ಮಿತಿ ಕಡಿಮೆಗೊಳಿಸುವಂತೆ ರೈಲ್ವೆ ಇಲಾಖೆಗೆ ಸುಪ್ರಿಂ ಕೋರ್ಟ್ ನಿರ್ದೇಶಿಸಿದೆ. ಒಂದೊಮ್ಮೆ ವೇಗದ ಮಿತಿ ಕಡಿತಗೊಳಿಸದಿದ್ದರೆ ತಪ್ಪಿತಸ್ಥ ಚಾಲಕ ಮತ್ತು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ. ಅದರಂತೆ ರಾಜ್ಯದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸಲಿದೆ ಎಂದು ನ್ಯಾಯಾಲಯ ಹೇಳಿದ್ದು, ದೇಶದ ಯಾವುದೇ ಭಾಗದಲ್ಲಿರುವ ವನ್ಯಜೀವಿ ಸಂಪತ್ತು ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಮೌಖಿಕವಾಗಿ ನುಡಿಯಿತು.

8 ವರ್ಷದಲ್ಲಿ 60ಕ್ಕೂ ಅಧಿಕ ಪ್ರಾಣಿಗಳು ಸಾವು

ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೋಂಡಾ-ಮೀರಜ್ ಮಾರ್ಗಗಳು ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಸಂರಕ್ಷಿತ ಅರಣ್ಯಗಳ ನಡುವೆ ಹಾದುಹೋಗಿವೆ. ಲಭ್ಯ ಮಾಹಿತಿ ಪ್ರಕಾರ 2014ರಿಂದ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಆನೆ, ಕಾಡುಕೋಣ, ಕರಡಿ, ಕಾಡುನಾಯಿ, ಕಾಡುಹಂದಿ ಹಾಗೂ ಜಿಂಕೆಗಳು ಸೇರಿ 60ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇದೀಗ ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಈ ಅರ್ಜಿಯ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಬೇಕಾಗಿದೆ. ಈಗಾಗಲೇ ಕಾಡು ಪ್ರದೇಶಗಳಲ್ಲಿ ರೈಲುಗಳ ರಾತ್ರಿ ಸಂಚಾರದ ವೇಗದ ಮಿತಿ ಕಡಿಮೆ ಇದೆ. ಅದನ್ನು ಪಾಲನೆ ಮಾಡಲಾಗುತ್ತಿಲ್ಲವೇ? ಈಗಿನ ವೇಗ ಕೂಡಾ ಪ್ರಾಣಿಗಳಿಗೆ ಅಪಾಯಕಾರಿ ಆಗುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕಾಗಿದೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ALL THAT BREATHS!; ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನಿಮಾ, ಮುಸ್ಲಿಂ ಸೋದರರ ಯಶೋಗಾಥೆ

Exit mobile version