ಬೆಂಗಳೂರು: ಸೇವೆಯಿಂದ ವಜಾ ಆಗಿರುವ ಸಿಬ್ಬಂದಿಗೆ ನ್ಯಾಯ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೊಮ್ಮೆ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಈ ಹಿಂದಿನ ಸರ್ಕಾರ ನೌಕರರಿಗೆ ಭರವಸೆ ನೀಡಿ ಕೈತೊಳೆದುಕೊಂಡಿದೆ, ಹೀಗಾಗಿ ಹಾಲಿ ಸರ್ಕಾರ ನೌಕರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ಅ.5ರಂದು ಪ್ರತಿಭಟನೆ (Transport Strike) ನಡೆಸಲು ನಿರ್ಧರಿಸಿದೆ.
2021ರಲ್ಲಿ ಮುಷ್ಕರ ನಡೆಸಿದಾಗ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಒಕ್ಕೂಟದ ಜತೆ ಸಂಧಾನ ಮಾಡಿದ್ದ ಬಿಜೆಪಿ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟಿತ್ತು. ಅದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹಾಲಿ ಸರ್ಕಾರ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಒಕ್ಕೂಟ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ. ಸಾಂಕೇತಿಕ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | Women’s Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್; 454 ಸಂಸದರ ಬೆಂಬಲ!
ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದ ಇಂದಿಗೂ 300ಕ್ಕೂ ಅಧಿಕ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ. ಅವರಿಗೆ ನ್ಯಾಯ ನೀಡುವ ಜತೆಗೆ ಹತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಒಕ್ಕೂಟದ ಬೇಡಿಕಗಳು ಏನು?
- 2020ರ ಜ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳದ ಬಾಕಿ ಹಣ ನೀಡಬೇಕು.
- 2020ರ ಜ.1ರಿಂದ ರಿಂದ ನಿವೃತ್ತ ನೌಕರರ ವೇತನ ಹೆಚ್ಚಳದ ಫಿಕ್ಸೇಷನ್ ಆಗಬೇಕು.
- ತುಟ್ಟಿ ಭತ್ಯೆ ಬಾಕಿ ಹಣ ನೀಡಬೇಕು.
- 2021ರ ಮುಷ್ಕರದ ವೇಳೆ BJP ಸರ್ಕಾರ ತೆಗೆದುಕೊಂಡಿರುವ ಎಲ್ಲಾ ರೀತಿಯ ಶಿಕ್ಷೆಗಳು ಹಿಂಪಡೆಯಬೇಕು.
- ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳೇ ಓಡಿಸಬೇಕು.
- ಕೇಂದ್ರ ಸರ್ಕಾರ FAME-2 ಯೋಜನೆ ( ಎಲೆಕ್ಟ್ರಿಕ್ ಬಸ್‌ಗಳನ್ನು) ಖಾಸಗಿಯವರ ಮೂಲಕ ಓಡಿಸುವ ಖಾಸಗೀಕರಣವನ್ನು ವಿರೋಧಿಸಬೇಕು.
- BMTC ಯಲ್ಲಿ ಡಬ್ಬಲ್ ಡ್ಯೂಟಿ ಮಾಡಿಸಿ 4 ಗಂಟೆಗಳ ಕಾಲ OT ನೀಡುವುದನ್ನು ನಿಲ್ಲಿಸಿ, ಕಾನೂನು ಬದ್ಧವಾಗಿ ಡಬಲ್ ವೇತನ ನೀಡಬೇಕು.
- ಕಿರುಕುಳಗಳು/ ದೌರ್ಜನ್ಯದ/ ಭ್ರಷಾಚಾರದ ಆಡಳಿತಕ್ಕೆ ಕಡಿವಾಣ ಹಾಕಬೇಕು.
- ಗುತ್ತಿಗೆ ಕಾರ್ಮಿಕರ ನೇಮಕಾತಿ ವಿರೋಧಿಸಬೇಕು
- ಆಡಳಿತ ವರ್ಗ ಏಕ ಪಕ್ಷೀಯವಾಗಿ ಸುತ್ತೋಲೆಗಳನ್ನು ತರುವ ಪದ್ಧತಿ ನಿಲ್ಲಿಸಿ, ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಿ ಉತ್ತಮ ಕೈಗಾರಿಕಾ ಬಾಂದವ್ಯ ರೂಪಿಸಬೇಕು.
ಇದನ್ನೂ ಓದಿ | Gift Politics : ಗಿಫ್ಟ್ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ