ಬೆಳಗಾವಿ: ಸಾರಿಗೆ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಸಾರಿಗೆ ಸಚಿವ ಶ್ರೀರಾಮುಲು, ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಸಾರಿಗೆ ನೌಕರರು (Transport Workers Protest) ಸೋಮವಾರ ಅಂತ್ಯಗೊಳಿಸಿದ್ದಾರೆ.
ಸತತ ಮೂರು ಗಂಟೆಗಳ ಕಾಲ ಸಾರಿಗೆ ನೌಕರರ ಜತೆ ಸಚಿವ ಶ್ರೀರಾಮುಲು ಮಾತುಕತೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಸುವರ್ಣ ಸೌಧದ ಎದುರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹೋರಾಟಗಾರರು ಕೈಬಿಟ್ಟಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಮುಷ್ಕರದಲ್ಲಿ ೨೫೦೦ ವಿವಿಧ ಸಾರಿಗೆ ನಿಗಮದ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅವರನ್ನು ಯಾವುದೇ ನಿಬಂಧನೆಗಳಿಲ್ಲದೇ ಮರು ನೇಮಕ ಮಾಡಿಕೊಳ್ಳಬೇಕು. ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು. ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕೂ ನಿಗಮದ ಸದಸ್ಯರ ಮೇಲೆ ಹಾಕಿರುವ ಕೇಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ರಾಜ್ಯ ಸರ್ಕಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಪ್ಪಿರುವ ಹಿನ್ನೆಲೆಯಲ್ಲಿ ನೌಕರರು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.
ಇದನ್ನೂ ಓದಿ | SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ