Site icon Vistara News

DK Shivakumar: ನಿಗಮ ಮಂಡಳಿ ಪಟ್ಟಿಗೆ ಸೈನ್‌ ಮಾಡಿಸೋಕೆ ದೆಹಲಿಗೆ ಪಯಣ: ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ನಿಗಮ, ಮಂಡಳಿ ನೇಮಕ ಪಟ್ಟಿಯನ್ನು (Corporation and Board Recruitment List) ನಾವು ನಮ್ಮ ಹೈಕಮಾಂಡ್ (Congress High Command) ನಾಯಕರಿಗೆ ರವಾನಿಸಿದ್ದು, ಅದಕ್ಕೆ ಅಂಕಿತ ಪಡೆಯಬೇಕಾಗಿದೆ. ಹೀಗಾಗಿ ರಾಜ್ಯದ ನಾಯಕರು ದೆಹಲಿಗೆ ತೆರಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ದೆಹಲಿ ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಅಲ್ಲಿಗೆ ಹೋಗುತ್ತಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಂಬಂಧ ನಿರ್ದೇಶನ ನೀಡಿದ್ದಾರೆ. ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ಶಾಸಕರಿಗೆ ಸೂಚಿಸುತ್ತೇವೆ ಎಂದು ಹೇಳಿದರು.

‌ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಭೇಟಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ನಾರಾಯಣಗೌಡರು ಕನ್ನಡದಲ್ಲಿ ನಾಮಫಲಕ ಹಾಕಲು ಹೋರಾಟ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರೆಲ್ಲರ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ

ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗುತ್ತಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “‌ಪ್ರತಾಪ್‌ ಸಿಂಹ ಅವರನ್ನು ಯಾರು ಟ್ರ್ಯಾಪ್ ಮಾಡುತ್ತಾರೆ? ಪ್ರತಾಪ್ ಸಿಂಹ ಅವರೇನೂ ಸಣ್ಣ ಹುಡುಗನಲ್ಲ, ನಾನೂ ಹುಡುಗನಲ್ಲ. ಇದು ನಮ್ಮ ಜವಾಬ್ದಾರಿ ಅಷ್ಟೇ ಎಂದು ತಿಳಿಸಿದರು.

ರಾಮನಗರದಲ್ಲಿ ಒಂಟಿ ಸಲಗ ದಾಳಿ: ಪರಿಹಾರ, ಉದ್ಯೋಗ ನೀಡಲು ಡಿಕೆಶಿ ಸೂಚನೆ

ರಾಮನಗರದ ಅರಳಿಕರೆದೊಡ್ಡಿ‌ ಗ್ರಾಮದಲ್ಲಿ ಒಂಟಿ ಸಲಗ ದಾಳಿಯಿಂದ ಮೃತಪಟ್ಟಿರುವ ತಿಮ್ಮಪ್ಪ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ, ಅವರ ಮಗಳಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಿಂದ ಭಾನುವಾರ ದೂರವಾಣಿ ಮೂಲಕ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಡಿ.ಕೆ. ಶಿವಕುಮಾರ್ ಅವರು, “ಗ್ರಾಮಸ್ಥರ ಬೇಡಿಕೆಯಂತೆ ಅಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಿ ಎಂದು ತಿಳಿಸಿದರು.

ಇದನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆಗೆ ಸಿದ್ದತೆ; ಅಮೆರಿಕದಲ್ಲೂ ಸಂಭ್ರಮಾಚರಣೆ

ಅರಳಿಕರೆ ದೊಡ್ಡಿ ಗ್ರಾಮದ ತಿಮ್ಮಪ್ಪ (60) ಅವರು ಭಾನುವಾರ ಮುಂಜಾನೆ‌ ನಾಯಿಗಳು ಬೊಗಳುತ್ತಿದ್ದ ಶಬ್ದ ಕೇಳಿ ತೋಟದ ಮನೆ ಬಳಿ ಹೋದಾಗ ಒಂಟಿ ಕಾಡಾನೆ ದಾಳಿಗೆ ಸಿಕ್ಕಿ ಬಲಿಯಾಗಿದ್ದಾರೆ.

Exit mobile version