ಬೆಂಗಳೂರು: ನಾಡು ಕಂಡ ಶ್ರೇಷ್ಠ ಸಂತರಲ್ಲೊಬ್ಬರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರ ದೇಹಾಂತ್ಯಕ್ಕೆ ರಾಜ್ಯಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಭಕ್ತರಿಂದ ಶ್ರದ್ಧಾಂಜಲಿ, ನುಡಿನಮನ ಸಲ್ಲಿಕೆಯಾಗಿದೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣ ಪಟ್ಟಣದ ಅನುಭವ ಮಂಟಪದಲ್ಲಿ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಗಿದೆ. ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಭಕ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಸವ ಅಭಿಮಾನಿಗಳು ಹಾಗೂ ಮಕ್ಕಳು ಭಾಗಿಯಾಗಿದ್ದರು.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರೇಮಠ ಸಂಸ್ಥಾನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸೇರಿ ಅನೇಕ ಸಂಘಟನೆಗಳಿಂದ ನುಡಿನಮನ ನಡೆಸಲಾಯಿತು. ಎಲ್‌ಇಡಿ ಪರದೆಯಲ್ಲಿ ಶ್ರೀಗಳ ಅಂತಿಮ ದರ್ಶನವನ್ನು ಈ ವೇಳೆ ವೀಕ್ಷಿಸಲಾಯಿತು.
ಬೀದರ್ ಭಾಲ್ಕಿಯ ಹುಲಸೂರ ಪಟ್ಟಣದ ಹೊರವಲಯದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಲಿಂಗೈಕ್ಯ ಬಸವಕುಮಾರ ಶಿವಯೋಗಿಗಳ 47ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಸಿದ್ದಲಿಂಗ ಶ್ರೀಗಳಿಗೆ ಹಲವು ಸಂಘಟನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗದಗಿನ ಯುವಕರ ಬಳಗದಿಂದ ಶ್ರದ್ಧಾಂಜಲಿ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯುವಕರ ಬಳಗದ ವತಿಯಿಂದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಕ್ಷ್ಮೇಶ್ವರ ಪಟ್ಟಣಕ್ಕೂ ಶ್ರೀಗಳಿಗೂ ಅವಿನಾಭಾವ ಸಂಬಂಧವಿದ್ದು, 2008ರಲ್ಲಿ ಲಕ್ಷ್ಮೇಶ್ವರದಲ್ಲಿ ಶ್ರೀಗಳು ಪ್ರವಚನ ನಡೆಸಿದ್ದರು. ಈ ಹಿನ್ನೆಲೆ ಅವರ ಪ್ರವಚನದಿಂದ ತಾಲೂಕಿನ ಸಹಸ್ರಾರು ಯುವಕರು ತಮ್ಮ ಜೀವನದ ಸನ್ಮಾರ್ಗದ ದಾರಿ ಕಂಡುಕೊಂಡಿದ್ದರು ಎಂದು ಯುವಬಳಗದ ಮುಖಂಡ ಡಾ.ಚಂದ್ರು ಹೇಳಿದರು.
ಗದಗ ನಗರದ ಕೆವಿಎಸ್ಆರ್ ಕಾಲೇಜಿನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಬೆಳಗಿ ಸಂತಾಪ ಸೂಚಿಸಿದರು.
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಯಾಲೂರಿನ ಜ್ಞಾನಸಿಂಧು ಮಕ್ಕಳು ಸಿದ್ದೇಶ್ವರ ಶ್ರೀಗಳ ದೇಹಾಂತ್ಯದ ಹಿನ್ನೆಲೆಯಲ್ಲಿ ಧ್ಯಾನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ | Siddheshwar swamiji | ನಡೆದಾಡುವ ದೇವರ ಅಂತಿಮ ಯಾತ್ರೆ: ಶೋಕ ಸಾಗರದಲ್ಲಿ ಜನಸಾಗರ