ಬೆಂಗಳೂರು: ನಗರದ ಹೃದಯಭಾಗವಾದ ಉಪ್ಪಾರಪೇಟೆಯಲ್ಲಿ ಗುರುವಾರ ಸಂಜೆ ಸಾರ್ವಜನಿಕ ಸ್ಥಳದಲ್ಲೇ ಮೂವರು ಗೆಳೆಯರ ನಡುವೆ ಹುಟ್ಟಿಕೊಂಡ ಒಂದು ಕಿರಿಕ್ ಒಬ್ಬನ ಜೀವ ಬಲಿಗೆ (Murder Case) ಕಾರಣವಾಗಿದೆ. ಕ್ಷುಲ್ಲಕ ವಿಷಯಕ್ಕಾಗಿ ಒಬ್ಬಾತ ಇಬ್ಬರು ಗೆಳೆಯರ ಮೇಲೆ ಚೂರಿಯಿಂದ ಇರಿದಿದ್ದಾನೆ. ಬಿಡಿಸಲು ಹೋದ ಸಾರ್ವಜನಿಕರ ಮೇಲೂ ದಾಳಿ ಮಾಡಿದ್ದಾನೆ. ಇದರಿಂದ ಒಬ್ಬ ಮೃತಪಟ್ಟರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದಾರ್ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದವನು ಗಣೇಶ್. ಹಲ್ಲೆ ಮಾಡಿದವನೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್, ಗಣೇಶ್ ಹಾಗೂ ಇನ್ನೊಬ್ಬ ಮೂವರೂ ಅಡುಗೆ ಕೆಲಸ ಮಾಡಿಕೊಂಡಿದ್ದವರು. ಪ್ರತಿದಿನ ಬೆಂಗಳೂರಿನ ಬೇರೆ ಬೇರೆ ಕಡೆ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಉಪ್ಪಾರಪೇಟೆಯ ಭಾಗ್ಯ ವಿನಾಯಕ ದೇವಸ್ಥಾನದ ಪಕ್ಕದಲ್ಲಿ ಬಂದು ಮೂವರೂ ಕೂತಿದ್ದಾರೆ.
ಹೀಗೆ ಕುಳಿತಿದ್ದವರ ಮಧ್ಯೆ ಏನೋ ಕಿರಿಕ್ ಆಗಿದೆ. ನೋಡ ನೋಡ್ತಿದ್ದಂತೆ ಗಣೇಶ ಎಂಬಾತ ಮಲ್ಲಿನಾಥ್ ಬಿರಾದರ್ ಮತ್ತು ಮತ್ತೊಬ್ಬನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದನ್ನು ತಡೆಯಲು ಬಂದ ಸಾರ್ವಜನಿಕರಿಗೂ ಗಣೇಶ್ ಇರಿದಿದ್ದಾನೆ. ಕೂಡಲೇ ಯಾರೋ ಆತನನ್ನು ಹಿಡಿದುಕೊಂಡಿದ್ದಾರೆ.
ಚೂರಿ ಇರಿತಕ್ಕೆ ಒಳಗಾದ ಇಬ್ಬರು ಮತ್ತು ಗಲಾಟೆ ವೇಳೆ ಗಾಯಗೊಂಡಿದ್ದ ಗಣೇಶ, ಈ ಮೂವರನ್ನೂ ಸ್ಥಳೀಯರ ಸಹಾಯದಿಂದ ಕೆ.ಸಿ.ಜನರಲ್ ಆಸ್ತತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾಗಿದ್ದ ಮಲ್ಲಿನಾಥ್ ಬಿರಾದರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮತ್ತೋರ್ವನ ಮರ್ಮಾಂಗಕ್ಕೆ ಚಾಕು ಇರಿತವಾಗಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ. ಆರೋಪಿ ಗಣೇಶ್ ಗೂ ಗಾಯವಾಗಳಾಗಿವೆ. ಯಾರೂ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಜಗಳದ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.
ಏನೇ ಹೇಳಿ ಒಟ್ಟಿಗೆ ಕೆಲಸ ಮಾಡ್ತಿದ್ದವರ ಮಧ್ಯೆ ಕ್ಷುಲಕ ಕಾರಣಕ್ಕೆ ಉಂಟಾದ ಜಗಳ ಒಬ್ಬನ ಹತ್ಯೆಯಲ್ಲಿ ಅಂತ್ಯವಾಗಿದ್ದು, ಮಾಡಿದ ತಪ್ಪಿಗೆ ಹೊಟ್ಟೆ ಪಾಡಿಗಾಗಿ ಕೆಲ ಅರಿಸಿಕೊಂಡು ಬಂದಿದ್ದ ಗಣೇಶನೂ ಜೈಲು ಪಾಲಾಗುವಂತಾಗಿದೆ.
ಇದನ್ನೂ ಓದಿ : Murder Case: ದಾವಣಗೆರೆಯಲ್ಲಿ ಯುವಕನೊಬ್ಬನ ಕುತ್ತಿಗೆ ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ