Site icon Vistara News

Tomato Price : 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಪತ್ತೆ, ಹಣದೊಂದಿಗೆ ಚಾಲಕ ಪರಾರಿ!

Tomato lorry lost and found

ಕೋಲಾರ: ಕೋಲಾರದಿಂದ ರಾಜಸ್ಥಾನಕ್ಕೆ (Kolara to Rajasthan) 21 ಲಕ್ಷ ರೂ. ಮೌಲ್ಯದ ಟೊಮ್ಯಾಟೋ (Tomato price) ಹೊತ್ತು ಸಾಗಿ, ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಲಾರಿ ರಾಜಸ್ಥಾನದಲ್ಲಿ ಜಾಲೂರ್‌ ಬಳಿ ಪತ್ತೆಯಾಗಿದೆ. ಆದರೆ, ಅದರಲ್ಲಿ ಟೊಮ್ಯಾಟೋ ಇಲ್ಲ. ಟೊಮ್ಯಾಟೋವನ್ನು ದಾರಿಯಲ್ಲಿ ಎಲ್ಲೋ ಮಾರಾಟ ಮಾಡಿ ಹಣದೊಂದಿಗೆ ಚಾಲಕ ಪರಾರಿಯಾಗಿದ್ದಾನೆ (Lorry driver escape).

ಹೌದು, ಕಳೆದ ಜುಲೈ 27ರಂದು ಕೋಲಾರ ಎಪಿಎಂಸಿ ಯಾರ್ಡ್‌ನಿಂದ (Kolar APMC Yard) ಸುಮಾರು 15 ಲಕ್ಷ ರೂ. ಮೌಲ್ಯದ ಟೊಮ್ಯಾಟೊವನ್ನು ಹೊತ್ತು ಲಾರಿಯೊಂದು ಜೈಪುರಕ್ಕೆ ತೆರಳಿತ್ತು. ಕೋಲಾರದ ಇಬ್ಬರು ವ್ಯಾಪಾರಿಗಳು ರಾಜಸ್ಥಾನದ ವ್ಯಾಪಾರಿಗಳ ಬೇಡಿಕೆಯಂತೆ ಈ ಟೊಮ್ಯಾಟೋ ಕಳುಹಿಸಿಕೊಟ್ಟಿದ್ದರು.

ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾದಿಕ್ ಅವರು ಕುರುಬಾನ್‌ ಖಾನ್‌ ಎಂಬವರಿಗೆ ಸೇರಿದ ಲಾರಿಯನ್ನು ಬುಕ್‌ ಮಾಡಿದ್ದರು. ಚಾಲಕ ಅನ್ವರ್‌ ಎಂಬಾತ ಟೊಮ್ಯಾಟೊ ಹೊತ್ತ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದ.

ಎಲ್ಲವೂ ಸರಿಯಾಗಿದ್ದರೆ ಲಾರಿ ಶನಿವಾರ ರಾತ್ರಿ ಜೈಪುರ ತಲುಪಬೇಕಾಗಿತ್ತು. ಆದರೆ, ಅದು ತಲುಪದೆ ಇದ್ದಾಗ ಅಲ್ಲಿನ ವ್ಯಾಪಾರಿಗಳು ಕರೆ ಮಾಡಿದ್ದರು. ಇತ್ತ ಲಾರಿ ಚಾಲಕನಿಗೆ ಕರೆ ಮಾಡಿದರೆ ಆತನ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಆಗ ಟ್ರಾನ್ಸ್‌ಪೋರ್ಟ್‌ ಕಂಪನಿಗೆ ಏನೋ ಮೋಸ ಆದ ಸಂಶಯ ಬಂದಿದೆ. ಕೂಡಲೇ ಅವರು ಕೋಲಾರ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರ ಪ್ರಕಾರ, ಜಿಪಿಎಸ್‌ ಟ್ರ್ಯಾಕರ್‌ ಮೂಲಕ ಗಮನಿಸಿದಾಗ ಲಾರಿ ಕೋಲಾರದಿಂದ 1600 ಕಿ.ಮೀ. ದೂರ ಸಾಗಿ, ನಂತರ ಟ್ರ್ಯಾಕ್‌ ತಪ್ಪಿಸಿಕೊಂಡಿತ್ತು. ಟ್ರಕ್‌ನ ಚಾಲಕನ ಜತೆಗೆ ಕ್ಲೀನರ್‌ ಕೂಡಾ ಇದ್ದ. ಆದರೆ, ಆತನ ಬಳಿ ಮೊಬೈಲ್‌ ಇರಲಿಲ್ಲ. ಆರಂಭದಲ್ಲಿ ಟ್ರಕ್‌ ಏನಾದರೂ ಅಪಘಾತಕ್ಕೀಡಾಗಿರಬಹುದೇ ಎಂಬ ಸಂಶಯ ಎದುರಾಗಿತ್ತು. ಆದರೆ, ಹಾಗೇನಾದರೂ ಆಗಿದ್ದರೆ ಮಾಹಿತಿ ಬರಬೇಕಾಗಿತ್ತು ಎಂದು ಪೊಲೀಸರೂ ಅಂದುಕೊಂಡರು.

ರಾಜಸ್ಥಾನದ ಜಾಲೂರ್‌ ಬಳಿ ಲಾರಿ ಪತ್ತೆ!

ಈ ನಡುವೆ, 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಹೊತ್ತು ಸಾಗಿ ನಾಪತ್ತೆಯಾಗಿದ್ದ ಈಷರ್‌ ಲಾರಿ ರಾಜಸ್ಥಾನದ ಜಾಲೂರ್ ಬಳಿ ಪತ್ತೆಯಾಗಿದೆ. ಆದರೆ, ಅದರಲ್ಲಿ ಟೊಮ್ಯಾಟೊ ಇಲ್ಲ.

ಟೊಮ್ಯಾಟೋ ಮಾರಿ ಹಣದೊಂದಿಗೆ ನಾಪತ್ತೆ!

ನಿಜವೆಂದರೆ, ಚಾಲಕ ಟೊಮ್ಯಾಟೋ ಲಾರಿಯನ್ನು ರಾಜಸ್ಥಾನದ ಬದಲು ಗುಜರಾತ್‌ ಕೊಂಡು ಹೋಗಿದ್ದ. ಅದರಲ್ಲಿದ್ದ ಟೊಮ್ಯಾಟೋವನ್ನು ಅಹಮದಾಬಾದ್‌ನಲ್ಲಿ ಮಾರಾಟ ಮಾಡಿ ಬಳಿಕ ರಾಜಸ್ಥಾನದ ಜಾಲೂರ್‌ಗೆ ತಂದು ಅಲ್ಲಿ ಇಟ್ಟು ಪರಾರಿಯಾಗಿದ್ದಾನೆ.

ಟೊಮ್ಯಾಟೋವನ್ನು ಪ್ರಕಾಶ್‌ ಎಂಬವರಿಗೆ ಮಾರಾಟ ಮಾಡಿದ ಅನ್ವರ್‌ ಅವರ ಕೈಯಿಂದ ಹಣವನ್ನು ಪಡೆದು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಈ ಮೋಸದ ಜಾಲದಲ್ಲಿ ಲಾರಿ ಮಾಲೀಕ ಕುರುಬಾನ್‌, ಚಾಲಕ ಅನ್ವರ್‌ ಮತ್ತು ಗುಜರಾತ್‌ನ ಏಜೆಂಟ್‌ ಸೇರಿ ಆರು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈಗ ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾದಿಕ್‌ ಅವರು ಗುಜರಾತ್‌ಗೆ ತೆರಳಿ ದೂರು ನೀಡಿದ್ದಾರೆ.

ಇದನ್ನೂ ಓದಿ : Tomato Price : ಕೋಲಾರದ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲೇ 1 ಕ್ರೇಟ್‌ ಟೊಮ್ಯಾಟೊ ಬೆಲೆ 2400 ರೂ! ಅಂದ್ರೆ ಕೆಜಿಗೆ 160 ರೂ!

Exit mobile version