ಕಾರವಾರ: “ದೇಶವನ್ನು ಪೋಲಿಯೋದಿಂದ ಮುಕ್ತ ಮಾಡಲು ಹೇಗೆ ನಾವೆಲ್ಲರೂ ಶ್ರಮವಹಿಸಿದ್ದೆವೋ ಹಾಗೆಯೇ ಇಂದು ಕ್ಷಯರೋಗವನ್ನು (Tuberculosis Day) ದೇಶದಿಂದ ಮುಕ್ತ ಮಾಡಲು ನಾವೆಲ್ಲರೂ ಶ್ರಮವಹಿಸುವ ಅಗತ್ಯವಿದೆ” ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇವರ ಆಶ್ರಯದಲ್ಲಿ “ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷಣೆಯೊಂದಿಗೆ ಆಯೋಜಿಸಲಾದ್ದ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯದ ಸಮಸ್ಯೆಗೆ ಒಳಗಾದವರನ್ನು ಸಮಾಜ ನೋಡುವ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ನಾವು ಕೋವಿಡ್ ಸಮಯದಲ್ಲಿ ನೋಡಿದ್ದೇವೆ. ರೋಗಗಳು ಮೇಲು-ಕೀಳು, ಬಡವ-ಶ್ರೀಮಂತ ಎನ್ನದೇ ಪ್ರತಿಯೊಬ್ಬರಿಗೂ ಬರುವಂಥದ್ದಾಗಿದೆ. ಕೊರೋನಾ ಸಂದರ್ಭದಲ್ಲಿ ರೋಗಗ್ರಸ್ತರಾದ ಎಲ್ಲರೂ ಬದುಕಿದರೆ ಸಾಕು ಎನ್ನುವ ಪರಿಸ್ಥಿತಿಯನ್ನು ನಾವು ಈಗಾಗಲೇ ಕಣ್ಣಾರೆ ಕಂಡಿದ್ದೇವೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಹೀಗಾಗಿ ಕ್ಷಯ ರೋಗ ಅಥವಾ ಇತರೆ ರೋಗದ ಸಮಸ್ಯೆಗಳಿಗೆ ಒಳಗಾದವರನ್ನು ಗುರುತಿಸಿ ಅಂಥವರಿಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯ ಇದೆ” ಎಂದರು.
“ಜನರಲ್ಲಿ ರೋಗಗಳ ಬಗ್ಗೆ ಭಯ ಇರಬಾರದು. ಅವುಗಳ ಬಗ್ಗೆ ಅರಿವು ಮತ್ತು ಜಾಗೃತಿ ಇರಬೇಕು. ಕ್ಷಯ ರೋಗಕ್ಕೆ ಒಳಗಾದವರು ವೈದ್ಯರು ನೀಡುವ ನಿರ್ದೇಶನ ಮತ್ತು ಚಿಕಿತ್ಸೆಯನ್ನು ಚಾಚೂ ತಪ್ಪದೇ ಪಾಲಿಸಿದರೆ ಮಾತ್ರ ಈ ವರ್ಷದ ಘೋಷ ವಾಕ್ಯದಂತೆ, ಹೌದು ನಾವು ಕ್ಷಯ ರೋಗವನ್ನು ಕೊನೆಗೂಳಿಸಬಹುದು. ಆಗ ಮಾತ್ರ ನಾವು ಕ್ಷಯ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ” ಎಂದರು.
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಶರದ ನಾಯಕ ಮಾತನಾಡಿ, “ಕಾಯಿಲೆಗಳು ಬರದಂತೆ ನಿಯಂತ್ರಿಸಲು ಎಲ್ಲೆಡೆಯೂ ಆರೋಗ್ಯ, ಎಲ್ಲರಿಗೂ ಆರೋಗ್ಯ ಎಂಬ ವಾಕ್ಯದಂತೆ ರೋಗಗಳನ್ನು ನಿರ್ವಹಣೆ ಮಾಡಲು ಪ್ರಾಥಮಿಕ ಹಂತದಲೇ ಆರೋಗ್ಯ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಟಿಬಿ ಕಾಯಿಲೆ ಪರೀಕ್ಷೆಯನ್ನು ಪ್ರಾರಂಭಿಸಿ ಈವರೆಗೆ 823 ಜನರನ್ನು ಪರೀಕ್ಷೆ ಮಾಡಲಾಗಿದೆ. ಈ ಕಾಯಿಲೆಯನ್ನು ನಿಯತ್ರಿಸಲು ಇತರೆ ಸಂಸ್ಥೆಗಳ ಸಹಕಾರ ಬೇಕು” ಎಂದರು.
“ಯಾರಿಗಾದರೂ ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಈ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಹಾಗೆಯೇ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ದೈಹಿಕ ವ್ಯಾಯಾಮವನ್ನು ಮಾಡುವುದು ಅವಶ್ಯಕವಾಗಿದೆ” ಎಂದರು.
ಇದನ್ನೂ ಓದಿ: Bank Fraud : ಸಹಕಾರಿ ಬ್ಯಾಂಕ್ ಹಗರಣ; ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಮೌನ ಪ್ರತಿಭಟನೆ
ಬಳಿಕ ಸಂಪನ್ಮೂಲ ವ್ಯಕ್ತಿ ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ್ ಎ. ಕ್ಷಯ ರೋಗದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಮಂಜುನಾಥ, ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಡಾ. ವಿನೋದ ಭೂತೆ, ಡಿ.ಎಲ್.ಒ ಡಾ.ಶಂಕರ ರಾವ್, ಡಿಎಂಒ ಡಾ. ರಮೇಶ ರಾವ್, ಕುಟುಂಬ ಕಲ್ಯಾಣ ಅಧಿಕಾರಿ ಅನ್ನಪೂರ್ಣ ವಸ್ತ್ರದ, ಡಿ.ಎಸ್.ಒ. ಡಾ.ಅರ್ಚನಾ ನಾಯಕ, ತಾಲೂಕು ಆರೋಗ್ಯ ಅಧಿಕಾರಿ ಸೂರಜ್ ನಾಯಕ್, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.