ಶಿರಾ: ನಗರಸಭೆ (Sira City Municipal Council) ಅಧ್ಯಕ್ಷ ಸ್ಥಾನಕ್ಕೆ ಅಂಜಿನಪ್ಪ ಅವರು ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. 15 ದಿನಗಳ ಹಿಂದೆ ಹಿಂದೆಯೂ ಆಂಜಿನಪ್ಪ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಎರಡು ದಿನಗಳ ನಂತರ ಅವರು ರಾಜೀನಾಮೆಯನ್ನು ವಾಪಸ್ ಪಡೆದಿದ್ದರು. ಈಗ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಅಂಗೀಕಾರವಾಗಲು 7 ದಿನಗಳ ಕಾಲಾವಕಾಶವಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತ ಇಲ್ಲದ ಕಾರಣ, ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ಅಂಜಿನಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಅಂಬುಜಾಕ್ಷಿ ನಟರಾಜು ಆಯ್ಕೆಯಾಗಿದ್ದರು.
ಸದ್ಯ ವಿಧಾನಸಭಾ ಚುನಾವಣೆ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅಂಜಿನಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆ ಮಾಜಿ ಶಾಸಕರು, ಚಿತ್ರದುರ್ಗ ಸಂಸದರು, ಬಿಜೆಪಿ, ಜೆಡಿಎಸ್ ನಗರಸಭೆ ಸದಸ್ಯರು ಒತ್ತಡ ತಂದು ರಾಜೀನಾಮೆ ಹಿಂಪಡೆಯುವಂತೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಂಜಿನಪ್ಪ ಮತ್ತೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | Assembly Session : ಸಿಎಂ ಸನ್ನೆ ಮಾಡಿದ್ದಕ್ಕೆ ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದರು: ಎಚ್.ಡಿ. ಕುಮಾರಸ್ವಾಮಿ
ರಾಜೀನಾಮೆ ಅಂಗೀಕಾರವಾಗಲು 7 ದಿನ ಕಾಯುವ ಪರಿಸ್ಥಿತಿಯ ನಡುವೆಯೂ ಮೂರು ಪಕ್ಷಗಳಲ್ಲಿ ಕುದುರೆ ವ್ಯಾಪಾರ ಶುರುವಾಗಿದೆ. ವಿಧಾನಸಭಾ ಅಧಿವೇಶನ ಮುಗಿದ ನಂತರ ಹಾಲಿ ಶಾಸಕ ಟಿ.ಬಿ.ಜಯಚಂದ್ರ ಅವರ ನಡೆ ಏನು ಎಂಬ ಬಗ್ಗೆ ತಿಳಿಯಲು ಕಾಂಗ್ರೆಸ್ ಸದಸ್ಯರು ಕಾಯುತ್ತಿದ್ದು, ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನ ವಶಕ್ಕೆ ಪಡೆಯಲು ಮೂರು ಪಕ್ಷಗಳಲ್ಲಿ ತಂತ್ರಗಾರಿಕೆ ನಡೆಯುತ್ತಿದೆ.