ತುಮಕೂರು: ಸುಪ್ರೀಂಕೋರ್ಟ್ ಆದೇಶದಂತೆ (Supreme Court Order) ತಮಿಳುನಾಡಿಗೆ ಕಾವೇರಿ ನೀರು ಬಿಡದೆ ಹೋದರೆ (Cauvery Water Dispute) ಸರ್ಕಾರವನ್ನೇ ವಜಾ ಮಾಡಿಬಿಡುವ ಅಪಾಯವೂ (Danger of Dismissal of Government) ಇದೆ ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಅಭಿಪ್ರಾಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅಲ್ಲಗಳೆದಿದ್ದಾರೆ.
ʻʻತಮಿಳುನಾಡಿಗೆ ನೀರು ಬಿಡದಿದ್ದರೆ ನಮ್ಮ ಅಧಿಕಾರ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಇವರು ಅಧಿಕಾರಕ್ಕಾಗಿ ರಾಜ್ಯದ ಹಿತ ಬಲಿ ಕೊಡುತ್ತಿದ್ದಾರೆ. ಇವರು ಬಹಿರಂಗ ಹೇಳಿಕೆ ನಿಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಕೊರ್ಟ್ ನಲ್ಲಿ ವಾದ ಮಾಡಬೇಕು. ಸುಪ್ರೀಂ ಕೊರ್ಟ್ ನಲ್ಲಿ ಈಗಿನ ವಾಸ್ತವ ಸ್ಥಿತಿ ಹೆಳಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಅಧಿಕಾರವೂ ಹೋಗುವುದಿಲ್ಲʼʼ ಎಂದು ಬೊಮ್ಮಾಯಿ ಹೇಳಿದರು
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಈ ಸರ್ಕಾರ ಆಡಳಿತ ನಡೆಸುವ ವಿಶ್ವಾಸ ಕಳೆದುಕೊಂಡಿದೆ. ಜನರೇ ಈ ಸರ್ಕಾರದ ಆಡಳಿತದ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಹೇಳಿದರು.
ಎಚ್.ಡಿ ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆದವರು, ಎರಡು ಬಾರಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರು ಅನುಭವದ ಮಾತು ಹೇಳಿದ್ದಾರೆ. ಆದರೆ, ಸರ್ಕಾರ ಇದ್ಯಾವುದನ್ನೂ ಕೇಳಿಸಿಕೊಳ್ಳುವ ವ್ಯವಧಾನವನ್ನು ಹೊಂದಿಲ್ಲ ಎಂದು ಬೊಮ್ಮಾಯಿ ಆಕ್ಷೇಪಿಸಿದರು.
ಇದನ್ನೂ ಓದಿ: Cauvery water dispute : ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕುವೆನೆಂದ ಸಿಎಂ; ನೀರು ಬಿಡದಿದ್ದರೆ ಸರ್ಕಾರವೇ ವಜಾ ಆಗಬಹುದು!
ಬೆದರಿಕೆ ಹೆಸರಲ್ಲಿ ಹಿಂದು ಕಾರ್ಯಕರ್ತನ ಬಂಧನ ತಪ್ಪು
ಇದೇ ವೇಳೆ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಕಾರ್ಯಕರ್ತನ ಬಂಧನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ಅವಧಿಯಲ್ಲಿ ಫೇಕ್ ನ್ಯೂಸ್ ಹೆಸರಿನಲ್ಲಿ ಬೆದರಿಕೆ ಹಾಕುವ ಕೆಲಸ ನಡೆಸಲಾಗುತ್ತಿದೆ. ಫೇಕ್ ನ್ಯೂಸ್ ಅಂತ ಹೇಳಿ ಎಲ್ಲರನ್ನು ಬೆದರಿಸಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.
ಶಾಮನೂರು ಹೇಳಿದ್ದಾರೆಂದರೆ ಕಾಂಗ್ರೆಸ್‌ಗೆ ಹಿನ್ನಡೆಯೇ
ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಬೆಲೆ ಇಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರಂಥ ಹಿರಿಯ ನಾಯಕರು ಹೇಳಿದ್ದಾರೆ ಎಂದರೆ ಅದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ. ಇದು ಖಂಡಿತವಾಗಿಯೂ ಮುಂದೆ ಪರಿಣಾಮ ಬೀರುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರು ಹಿರಿಯರು ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದಾರೆ. ಅವರು ಲಿಂಗಾಯತ ಅಧಿಕಾರಿಗಳಿಗೆ ಬೆಲೆ ಅಂತ ಹೇಳಿದ್ದರೆ ಅದು ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದ ಬೊಮ್ಮಾಯಿ, ಸರ್ಕಾರದ ನಡೆಗಳ ವಿರುದ್ಧ ಪಕ್ಷದೊಳಗೆ ತುಂಬಾ ಆಕ್ರೋಶವಿದೆ ಎಂದು ನುಡಿದರು.