ಕುಣಿಗಲ್: ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Gas Cylinder Blast) ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಟ್ಟಣದ ಸಂತೆಬೀದಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಸಂತೆಬೀದಿಯಲ್ಲಿರುವ ರವಿಕುಮಾರ್ ಎಂಬುವವರ ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ದಿನಸಿ ಸಾಮಗ್ರಿ ಹಾಗೂ ಕಿಟಕಿ ಬಾಗಿಲುಗಳು ಛಿದ್ರಗೊಂಡಿವೆ. ಗೊಡೆಗಳು ಬಿರುಕು ಬಿಟ್ಟಿವೆ.
ಇದನ್ನೂ ಓದಿ: Gas Cylinder Blast: ಲೈಟ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್ ಸ್ಫೋಟ; ಪತಿ- ಪತ್ನಿ ಗಂಭೀರ
ಘಟನೆಯಲ್ಲಿ ಮನೆಯಲ್ಲಿದ್ದ ರವಿಕುಮಾರ್ ಪತ್ನಿ ಶೃತಿ (45) ಮಕ್ಕಳಾದ ಕುಶಾಲ್ (11) ಹೇಮಲತಾ (16) ಅವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಸಿಲಿಂಡರ್ ಸ್ಪೋಟದ ಶಬ್ದ ಕೇಳಿ ಮನೆಯೊಳಗೆ ಬಂದ ಪಕ್ಕದ ಮನೆಯ ಮಂಜಮ್ಮ(42) ಶಿವಣ್ಣ(45), ಸಮೀನಾ (46) ಎಂಬುವವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿದ್ದು ಗಾಯಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಗ್ನಿಶಾಮಕ ಅಧಿಕಾರಿಗಳಾದ ಕೆಂಪರಾಜು, ಭೀಮನಗೌಡ, ಚೇತನ್, ಮಂಜುನಾಥ್, ರಾಜೇಶೇಖರ್ ಹಾಜರಿದ್ದರು. ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು
ತಡರಾತ್ರಿ ಆಸ್ಪತ್ರೆಗೆ ಶಾಸಕ ಡಾ. ರಂಗನಾಥ್ ಭೇಟಿ
ಸಿಲಿಂಡರ್ ಸ್ಫೋಟಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಬಗ್ಗೆ ಮಾಹಿತಿ ತಿಳಿದು ಕುಣಿಗಲ್ ಶಾಸಕ ಡಾ. ರಂಗನಾಥ್ ಶುಕ್ರವಾರ ತಡರಾತ್ರಿ ಗಾಯಗೊಂಡವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ವೈದ್ಯರಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.