ಗುಬ್ಬಿ : ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ರೀತಿಯ ನೋಟಿಸ್ ಆಗಲಿ ಮಾಹಿತಿ ಆಗಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನ ಕುಮಾರ್ (Gubbi News) ತಿಳಿಸಿದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ನಾವು ಸಹ ಇಂದಿನಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಆರಂಭಿಸಿದ್ದೇವೆ. ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಗಾಗಿ ನಮ್ಮ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬ ವದಂತಿ ಹರಡಿದೆ. ಆದರೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಬಂದ ಮೇಲೆ ಸ್ಪಷ್ಟನೆ ಸಿಗಲಿದೆ” ಎಂದು ತಿಳಿಸಿದರು.
“ನನ್ನನ್ನು ತೆಗೆದು ಹಾಕಲು ದೊಡ್ಡ ಪಿತೂರಿ ನಡೆಯುತ್ತಿದೆ. ನಾನು ಮತ್ತು ಹೊನ್ನಗಿರಿ ಗೌಡರು ಆಕಾಂಕ್ಷಿಗಳಾಗಿದ್ದೇವೆ. ಕೊನೆಯವರೆಗೂ ಹೋರಾಟ ಮಾಡುತ್ತೇವೆ” ಎಂದು ತಿಳಿಸಿದರು.
ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, “ಯಾವುದೇ ಕಾರಣಕ್ಕೂ ಗುಬ್ಬಿಯ ಮಾಜಿ ಶಾಸಕರಿಗೆ ನಾವು ಕೆಲಸ ಮಾಡುವುದಿಲ್ಲ. ಅವರ ಮೇಲೆ ದ್ವೇಷವನ್ನು ಸಾಧಿಸುವುದಿಲ್ಲ. ಅವರು ದೇವೇಗೌಡರನ್ನ ಬೈದಿರುವುದು ಬೇಸರ ತಂದಿದೆ. ನನಗೆ ಪಕ್ಷದಲ್ಲಿ ಬೇಸರ ತಂದರೆ ನಾನು ರಾಜೀನಾಮೆ ಕೊಡುತ್ತೇನೆ. ನಾವು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮೆಲ್ಲ ಕಾರ್ಯಕರ್ತರು ಹಿತೈಷಿಗಳ ಜತೆ ಮಾತುಕತೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಜೆಡಿಎಸ್ ಬಿಟ್ಟು ಕಾಂಗ್ರೆಸಿಗೆ ಬಂದಿರುವವರು ಯಾರು ಇದುವರೆಗೂ ಗೆದ್ದಿಲ್ಲ. ನಿಜವಾದ ಕಾಂಗ್ರೆಸ್ಸಿಗರು ಮಾತ್ರ ಗೆಲುವು ಪಡೆಯುತ್ತಾರೆ” ಎಂದು ತಿಳಿಸಿದರು.
ಮುಖಂಡ ಶಶಿಕಿರಣ್ ಮಾತನಾಡಿ “ಇದುವರೆಗೂ ಬಿ ಫಾರಂ ಯಾರಿಗೂ ನೀಡಿಲ್ಲ. ಸಿ ಫಾರಂಗೂ ಸಹ ತುಂಬಾ ಬೆಲೆ ಇದ್ದು ಅದನ್ನು ಸಹ ಪಡೆಯುವಂತಹ ಎಲ್ಲ ಅವಕಾಶಗಳು ಇವೆ. ಕಷ್ಟ ಬಿದ್ದು ಪಕ್ಷ ಕಟ್ಟಿರುವಂತವರಿಗೆ ಗೌರವ ಸಿಗಬೇಕು ಎಂಬುದು ನಮ್ಮ ಒತ್ತಾಯ. ನಾವು ಪಕ್ಷದಲ್ಲೇ ಇರುತ್ತೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ವಿ.ಶ್ರೀನಿವಾಸ್, ಶಿವಣ್ಣ ಗೋವಿಂದಪ್ಪ, ಶಂಕರೆ ಗೌಡ, ಯೋಗೀಶ್, ಲಕ್ಷ್ಮಿ ನಾರಾಯಣ್, ಸಿದ್ದೇಶ್, ಗಂಗಾಧರ್, ಹೇಮಂತ್, ರಂಗನಾಥ್, ಶಿವಾನಂದ್, ರೂಪಾ ಸೇರಿದಂತೆ ಇನ್ನಿತರರು ಹಾಜರಿದ್ದರು.