ತುಮಕೂರು: ಮಾಜಿ ಸಚಿವರು, ಹಿರಿಯ ಮುತ್ಸದ್ದಿಯಾಗಿದ್ದ ವೈ.ಕೆ.ರಾಮಯ್ಯ ಅವರ ಹೋರಾಟ ಮಾಡಿದ್ದರಿಂದ ಜಿಲ್ಲೆಗೆ ಹೇಮಾವತಿ ನೀರು ದೊರೆಯಿತು. ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲೆಯ ಎಲ್ಲ ಭಾಗಕ್ಕೂ ನೀರು ಒದಗಿಸುವ ಕೆಲಸ ಮಾಡಿದರು. ಆದರೆ, ಕುಣಿಗಲ್‌ನ ಇನ್ನೂ 45 ಕಿ.ಮೀ ಭಾಗಕ್ಕೆ ನೀರು ಸಿಗಬೇಕಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಹೇಮಾವತಿ ಕಾಲುವೆ ಮೂಲಕ ನೀರು ಪೂರೈಸಲಾಗುತ್ತದೆ. ಅದೇ ರೀತಿ ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ ಕೆಲಸವನ್ನು ಬಿಜೆಪಿ ಸರ್ಕಾರ (Jana sankalpa yatre) ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕುಣಿಗಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯ ಗಾಳಿ ಬೀಸುತ್ತಿದೆ. ಕಳೆದ ಚುನಾವಣೆಯಲ್ಲಿ ಕುಣಿಗಲ್, ತುಮಕೂರು ಗ್ರಾಮಾಂತರ, ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಅಲ್ಪ ಮತಗಳಲ್ಲಿ ನಾವು ಸೋತಿದ್ದೆವು. ಆದರೆ ಈ ಬಾರಿ ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಬಾರಿ ಅಂತರರಿಂದ ಗೆಲ್ಲುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂತು. ಇದಕ್ಕೆ ಪರ್ಯಾಯ ಶಕ್ತಿಯಾಗಿ ಬಿಜೆಪಿ ಬೆಳೆದಿದೆ. ಇಡೀ ದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿಯೂ ರಾಜ್ಯದಲ್ಲಿ ನೆಲಕಚ್ಚುತ್ತದೆ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಈಗಾಗಲೇ ಜನಸಂಕಲ್ಪ ಯಾತ್ರೆಯ ಮೂಲಕ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಜಿಲ್ಲೆಗಳನ್ನು ಸುತ್ತಿ ತುಮಕೂರು ಜಿಲ್ಲೆಗೆ ಬಂದಿದ್ದೇವೆ. ಎಲ್ಲಿ ಹೋದರೂ ಜನರಿಂದ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದನ್ನು ನೋಡಿದರೆ ನಮ್ಮ ಈ ಜನಸಂಕಲ್ಪ ಯಾತ್ರೆ ಮುಂದಿನ ದಿನಗಳಲ್ಲಿ ವಿಜಯಸಂಕಲ್ಪ ಆಗುತ್ತದೆ ಎನ್ನುವ ವಿಶ್ವಾಸ ಮೂಡುತ್ತಿದೆ ಎಂದು ತಿಳಿಸಿದರು.
ಜಾತಿ, ಧರ್ಮಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಧೀನ ದಲಿತರ ಉದ್ದಾರಕರು ಎಂದು ಕೈ ನಾಯಕರು ಭಾಷಣ ಮಾಡುತ್ತಾರೆ. ಆದರೆ ಹಿಂದುಳಿದವರು ಹಿಂದೆಯೇ ಇದ್ದಾರೆ, ಸಾಮಾಜಿಕ ನ್ಯಾಯದ ಭಾಷಣ ಮಾಡಿದವರು ಮುಂದೆ ಹೋಗಿದ್ದಾರೆ. ಅತಿ ಹೆಚ್ಚು ಅವಧಿಗೆ ಅಧಿಕಾರ ಕೊಟ್ಟರೂ ನೀವು ಏನೂ ಮಾಡಿಲ್ಲ ಎಂದು ಜನರು ಕಾಂಗ್ರೆಸ್‌ಗೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು, ಹಣಕಾಸಿನ ಸ್ಥಿತಿ ಗಂಭೀರವಾಗಿತ್ತು. ಕೋವಿಡ್‌ನಂತಹ ತುರ್ತು ಪರಿಸ್ಥಿತಿ ಇಲ್ಲದಿದ್ದರೂ 2 ಲಕ್ಷ ಕೋಟಿ ರೂಪಾಯಿ ಸಾಲವನ್ನು ಜನತೆ ಮೇಲೆ ಹೇರಿದರು. ಇಷ್ಟು ಸಾಲ ತಂದರೂ ರಾಜ್ಯದ ಅಭಿವೃದ್ಧಿಯಾಗಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಐದು ವರ್ಷದಲ್ಲಿ ಸುಮಾರು 32 ಸಾವಿರ ಕೋಟಿ ರೂಪಾಯಿ 7 ಲಕ್ಷ ಎಕರೆಗೆ ನೀರಾವರಿ ಒದಗಿಸಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷ ಐದು ವರ್ಷದಲ್ಲಿ 54 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಕೇವಲ 2 ಲಕ್ಷ ಎಕರೆ ನೀರಾವರಿ ಮಾಡಿದೆ. ಆದರೆ ಉಳಿದ ಹಣ ಎಲ್ಲಿ ಹೋಯಿತು, ಯಾರ ಕಿಸೆಗೆ ದುಡ್ಡು ಹೋಯಿತು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿ ಎಸಿಬಿಯನ್ನು ರಚಿಸಿತು. ಸುಮಾರು 50 ಕೇಸ್‌ಗಳ ಮೇಲೆ ಬಿ ರಿಪೋರ್ಟ್ ಹಾಕಿ ಯಾವುದೂ ಭ್ರಷ್ಟಾಚಾರ ಮಾಡಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು.
ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತೋರಿಸಲಿಲ್ಲ ಎಂದರೆ ಸರ್ಕಾರಕ್ಕೆ ಗೌರವ ಇರಲ್ಲ. ಹೀಗಾಗಿ
ಕಾರ್ಯಕರ್ತರು ಸರ್ಕಾರ ಕೆಲಸಗಳನ್ನು ಜನರಿಗೆ ತಲಿಪಿಸುವ ಕೆಲಸ ಮಾಡಬೇಕು ಎಂದರು. ಡೀಮ್ಡ್ ಫಾರೆಸ್ಟ್ ತೆಗೆದು ಜನರಿಗೆ ವಾಸಮಾಡಲು ಅವಕಾಶ ಮಾಡಲಾಗುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿದ್ದೇವೆ. ಮನೆ ಮನೆಗೆ ನೀರು ಕೊಡುವ ಕೆಲಸ ಮಾಡಿದ್ದು ನಮ್ಮ ಸರ್ಕಾರ. ಎಲ್ಲಾ ಭಾಗಕ್ಕೆ ನೀರು ಕೊಡುವ ಕೆಲಸ ಮಾಡಿದ್ದರೆ ಅದು ನಮ್ಮ ಸರ್ಕಾರ ಎಂದು ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ವಿರುದ್ಧ ಗುಡುಗಿದರು.
ಅನುದಾನ ಕೊಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ಕುಣಿಗಲ್ ಶಾಸಕರು ಓಡಾಡುತ್ತಾರೆ. ನಾನು ಜಿಲ್ಲಾ ಉಸ್ತುವಾರಿ ಇದ್ದಾಗ ಹೆಚ್ಚಿನ ಅನುದಾನ ಕೊಡಲಾಗಿದೆ. ನನ್ನ ಬಳಿ ದಾಖಲೆ ಇದೆ, ಸುಳ್ಳು ಯಾಕೆ ಹೇಳುತ್ತೀರಾ ಎಂದು ಡಾ.ರಂಗನಾಥ್ ವಿರುದ್ಧ ಕಿಡಿಕಾರಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಜನರ ಉತ್ಸಾಹ ನೋಡಿದರೆ 2023ರ ಫಲಿತಾಂಶ ಬಂದು ಸಂಭ್ರಮ ಮಾಡುತ್ತಿದ್ದಾರಾ ಎನ್ನಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕುಣಿಗಲ್‌ನಲ್ಲಿ ಬಿಜೆಪಿ ಬರುವುದು ಪಕ್ಕಾ. ಕಾಂಗ್ರೆಸ್‌ನವರು ರೈತರು, ಧೀನ ದಲಿತರು ಹಾಗೂ ಬಡವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೋಸ ಮಾಡಿದ್ದಾರೆ. ಒಂದು ಸುಳ್ಳನ್ನು ಹತ್ತು ಬಾರಿ ಹೇಳುತ್ತಾರೆ. ಜಾತಿ ಜಾತಿಗಳು, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಭಿತ್ತಿ ರಾಜಕಾರಣ ಮಾಡಿದ್ದಾರೆ. 45 ವರ್ಷಗಳಿಂದ ರಾಜ್ಯದಲ್ಲಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ. ಅವರಿಗೆ ಬರೀ ವೋಟ್ ಬೇಕು ಅಷ್ಟೇ. ಅವರು ಅದ್ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂಬುದು ಗೊತ್ತಿಲ್ಲ ಎಂದು ಕುಟುಕಿದರು.
ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ರೈತರ ಬೆನ್ನನ್ನೇ ಮುರಿದಿದೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ನಮ್ಮ ಸರ್ಕಾರ ಕುಣಿಗಲ್ ಹಾಗೂ ರಾಮನಗರಕ್ಕೆ 800 ಕೋಟಿ ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿದೆ. ಇನ್ನು ಸಾಕಷ್ಟು ಕಾಮಗಾರಿ ಮಾಡುತ್ತಿದ್ದೇವೆ. ಕಳೆದ ಬಾರಿ ನಮ್ಮ ಮೇಲೆ ಅಪಪ್ರಚಾರ ಮಾಡುವ ಒಬ್ಬ ಶಾಸಕನಿಗೆ ಬೆಂಬಲ ನೀಡಿದ್ದೀರಿ, ಆದರೆ ಈ ಬಾರಿ ಹಾಗೆ ಆಗುವುದು ಬೇಡ ಎಂದು ಮನವಿ ಮಾಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಎಷ್ಟು ಬಾರಿ ಸೋತಿದ್ದೀರಾ ಎಂದು ನಾನು ಕೃಷ್ಣಕುಮಾರ್‌ಗೆ ಕೇಳಿದೆ, ಮೂರು ಬಾರಿ ಎಂದಿದ್ದಾರೆ. ಆಗ ನನ್ನ ಜೀವನ ನೆನಪಾಯಿತು. ನಾನು ಸಹ ಮೂರು ಬಾರಿ ಸೋತಿದ್ದೆ. ಆದರೆ ಈ ಬಾರಿ ಆ ಸೋಲಿನ ಶನಿ ಬಿಡುತ್ತದೆ. ತಾಲೂಕಿನಲ್ಲಿ ಅಧಿಕಾರದಲ್ಲಿ ಇಲ್ಲದೆ ಇಷ್ಟೊಂದು ಜನ ಸೇರಿಸಿದ್ದಾರೆ. ಇದೆಲ್ಲಾ ನಮ್ಮ ಗೆಲುವಿನ ವಿಶ್ವಾಸ ತೋರಿಸುತ್ತದೆ. ನಮ್ಮ ಸರ್ಕಾರ ರೈತರಿಗೆ ಖಾತೆಗೆ ನೇರವಾಗಿ ಹಣ ಹಾಕಿದೆ. ಬೊಮ್ಮಾಯಿ ಸರ್ಕಾರ 4 ಸಾವಿರ, ಮೋದಿ ಸರ್ಕಾರ 6 ಸಾವಿರ ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರ ದಲಿತರಿಗೆ ಏನು ಮಾಡಿಲ್ಲ, ಬಿಜೆಪಿಗೆ ವೋಟು ಕೊಟ್ಟರೆ ದೇಶ ಬದಲಾಗುತ್ತದೆ ಎಂದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಕೃಷ್ಣಕುಮಾರ್ ಪರ ಘೋಷಣೆ
ಸಮಾವೇಶದಲ್ಲಿ ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಕೃಷ್ಣಕುಮಾರ್ ಪರ ಬೆಂಬಲಿಗರು ಘೋಷಣೆ ಕೂಗಿದ್ದು ಕಂಡುಬಂತು. ಈ ಬಾರಿ ಕೃಷ್ಣಕುಮಾರ್‌ಗೆ ಟಿಕೆಟ್ ಕೊಡುವಂತೆ ಘೋಷಣೆ ಕೂಗಿದರು. ಈ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ, ನೀವು ಹೀಗೆ ಘೋಷಣೆ ಕೂಗಿದರೆ ನಾವು ಜಾಗ ಖಾಲಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ನೀವು ಸುಮ್ಮನಿದ್ದರೆ ಒಳ್ಳೆಯದು, ಕೃಷ್ಣಕುಮಾರ್ ಆರೋಗ್ಯಕ್ಕೂ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | Basavaraja Bommai | ತುಮಕೂರಿನಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಷಿಪ್, ಸಾವಿರಾರು ಜಾಬ್: ಸಿಎಂ