ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿ ಉಚ್ಚಾಟನೆಗೊಂಡಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್‌ಗೆ ಜೆಡಿಎಸ್ ಮತ್ತೆ ಆಹ್ವಾನ ನೀಡಿದೆ. ಆದರೆ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಯು ಟರ್ನ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ದೇವೇಗೌಡ್ರು, ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕರು. ಶ್ರೀನಿವಾಸ್ ಅವರ ಬಗ್ಗೆ ಗೌರವವಿದೆ. ಎಲ್ಲಾರಿಗೂ ಕೈ ಮುಗಿದು ಒಳಗೆ ಬಾ, ಯಾತ್ರಿಕನೆ ಇದು ಸಸ್ಯಕಾಶಿ.
ನಮಗೆ ಯಾರ ಬಗ್ಗೆನೂ ದ್ವೇಷವಿಲ್ಲ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿ ಇದ್ರು. ಕೃಷ್ಣನಿಗೂ ಅಪವಾದ ಬಂತು.. ಚೌತಿಯಲ್ಲಿ ಚಂದ್ರನನ್ನು ನೊಡ್ದಂಗೆ. ದೇವರು ಅವರಿಗೆ ಒಳ್ಳೆ ಬುದ್ದಿ ಕೊಡ್ಲಿ, ಚಿಂತೆ ಮಾಡಿ. ಶ್ರೀನಿವಾಸ್ ಮಗ ಒಳ್ಳೆಯವನು ಇದ್ದಾನೆ, ಧರ್ಮಪತ್ನಿ ಒಳ್ಳೆಯವರು ಇದ್ದಾರೆ. ಮನೇಲಿ ಕುಳಿತು ಚಿಂತೆ ಮಾಡಿ ಎಂದು ಓಪನ್ ಆಫರ್ ನೀಡಿದ್ದರು.
ಕೂಡಲೇ ಸಮರ್ಥನೆ
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವಂತೆಯೇ ಇಬ್ರಾಹಿಂ ಯು ಟರ್ನ್ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿರುವಾಗಲೇ ನಡುವೆ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಇಬ್ರಾಹಿಂ, ಗುಬ್ಬಿ ಶ್ರೀನಿವಾಸ್ ಬರ್ತಾರೆ ಅಂದ್ರೆ ದೇವೆಗೌಡ್ರು, ಎಚ್.ಡಿ.ಕೆ. ತೀರ್ಮಾನ ಮಾಡ್ಬೇಕು ಅಂತ ಹೇಳಿದ್ದೇನೆ. ಈಗಾಗಲೇ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. 19ನೇ ತಾರೀಖು ಸಭೆ ಮಾಡ್ತೀನಿ ಎಂದಷ್ಟೆ ಹೇಳಿದ್ದೇನೆ. ನನ್ನ ಹೇಳಿಕೆ ತಪ್ಪಾಗಿ ತಿರುಚಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಪಂನಲ್ಲಿ ನಿಂತು ಗೆಲ್ಲೋ ಯೋಗ್ಯತೆ ಎಂಎಲ್‌ಸಿ ಶರವಣಗೆ ಇಲ್ಲ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್