ಕೊರಟಗೆರೆ: ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ. ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ (Koratagere News) ತಿಳಿಸಿದರು.
ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಸೋಮವಾರ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಅತಿ ಮುಖ್ಯ. ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯದ ವ್ಯವಸ್ಥೆಯಿದ್ದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ: Parliament Session 2024: ಜೂನ್ 24ರಿಂದ ಸಂಸತ್ ವಿಶೇಷ ಅಧಿವೇಶನ; ಸ್ಪೀಕರ್ ಆಯ್ಕೆ ಸೇರಿ ಏನೆಲ್ಲ ತೀರ್ಮಾನ?
ರಾಜ್ಯ ಸರ್ಕಾರವು ಬಾಣಂತಿ ಮತ್ತು ಮಗುವಿಗಾಗಿ, ಕೃಷ್ಣ ಕುಟೀರ ನಿರ್ಮಿಸಿದ್ದು .ಈ ಕುಟೀರದಲ್ಲಿ ಬಾಣಂತಿಯರಿಗೆ ಅಗತ್ಯವಾದ ಬಿಸಿನೀರು, ಶುದ್ಧ ಕುಡಿಯುವ ನೀರು ಮತ್ತು ಇತರೆ ಮೂಲ ಸೌಕರ್ಯಗಳು ಹೆಚ್ಚು ಹೆಚ್ಚು ದೊರೆಯಬೇಕು, ಈ ವಿಷಯವನ್ನು ತಾವು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಮನೆಯಲ್ಲಿ ದೌರ್ಜನ್ಯ ನಡೆದ ಸಂದರ್ಭ ಹೆಣ್ಣು ಮಕ್ಕಳು 112 ಸಹಾಯವಾಣಿಗೆ ಕರೆ ಮಾಡಬೇಕು. ಆಗ ತಕ್ಷಣ ಪೊಲೀಸರ ಪ್ರವೇಶವಾಗುವುದು. ಠಾಣೆಯಲ್ಲಿ ಹೆಣ್ಣು ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳದಿದ್ದಲ್ಲಿ ಅಥವಾ ಸ್ಪಂದಿಸದಿದ್ದಲ್ಲಿ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ಮಹಿಳೆಯರು ಯಾವುದೇ ಸಂದರ್ಭದಲ್ಲೂ ಸಹ ಸಮಸ್ಯೆ ಉಂಟಾದಲ್ಲಿ ತಮಗೆ ಮೆಸೇಜ್ ಮಾಡುವ ಮೂಲಕ ಅಥವಾ ವಾಟ್ಸಪ್ ಮೂಲಕ ಧೈರ್ಯವಾಗಿ ಸಂಪರ್ಕಿಸಬಹುದಾಗಿರುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಬಹುತೇಕ ಬಡ ಹೆಣ್ಣು ಮಕ್ಕಳು ವಾಸಿಸುವ ಮನೆಗಳು ಸೋರುತ್ತವೆ, ಯಾವಾಗ ಬಿದ್ದು ಹೋಗುತ್ತವೆ ತಿಳಿಯುವುದಿಲ್ಲ. ಆದುದರಿಂದ ಮೊದಲಿಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ ವಸತಿ ವ್ಯವಸ್ಥೆಯಾಗಬೇಕು. ಶುದ್ಧ ಕುಡಿಯುವ ನೀರು ಉತ್ತಮ ರಸ್ತೆ, ವಿದ್ಯುತ್ ಕಂಬಗಳು ಮುಂತಾದ ಮೂಲ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.
ಬಿಸಾಡಿಹಟ್ಟಿ ದತ್ತು
ಬಿಸಾಡಿ ಹಟ್ಟಿಯ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯ ಒದಗಿಸಿ ಅವರನ್ನು ಮೌಢ್ಯಾಚರಣೆಗಳಿಂದ ಹೊರತರುವ ನಿಟ್ಟಿನಲ್ಲಿ ದತ್ತು ಪಡೆಯುವುದಾಗಿ ಘೋಷಿಸಿದರು. ಇದಕ್ಕೂ ಮುನ್ನ ಹಟ್ಟಿಯ ಕೃಷ್ಣ ಕುಟೀರದಲ್ಲಿ ಇದ್ದಂತಹ ಬಾಣಂತಿ ಮಕ್ಕಳನ್ನು ಭೇಟಿಯಾದ ಅವರು, ಅಲ್ಲಿ ಒದಗಿಸಲಾಗಿರುತ್ತಿರುವ ಮೂಲ ಸೌಕರ್ಯ ಮುಂತಾದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಇದನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ತುಸು ಇಳಿಕೆ; ಇಷ್ಟಿದೆ ಇಂದಿನ ಬೆಲೆ
ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಇಒ ಅಪೂರ್ವ , ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.