Site icon Vistara News

Leopard Catch : ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ Arrest!

Leopard which attacked girl caught

ತುಮಕೂರು: ನಾಲ್ಕು ದಿನದ ಹಿಂದೆ ಅಂಗಳದಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿ (Seven year old girl) ಮೇಲೆ ದಾಳಿ ಮಾಡಿ, ಆಕೆಯ ಅಪ್ಪನ ಸಾಹಸಿಕ ಕಾರ್ಯಾಚರಣೆಯಿಂದ ಓಡಿ ಹೋಗಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಹಿಡಿದಿದ್ದಾರೆ (Leopard Catch). ತುಮಕೂರು ಜಿಲ್ಲೆ (Tumkur News) ಮತ್ತು ಅದೇ ತಾಲೂಕಿನ ಬೆಳ್ಳಾವಿ ಗ್ರಾಮದ ನಿವಾಸಿಗಳಾದ ರಾಕೇಶ್‌ ಮತ್ತು ಹರ್ಷಿತಾ ದಂಪತಿಯ ಮಗಳು ಲೇಖನ ಮೇಲೆ ಈ ಚಿರತೆ ಮಂಗಳವಾರ ಸಂಜೆ (ನವೆಂಬರ್‌ 7) ದಾಳಿ ಮಾಡಿತ್ತು.

ನಾಲ್ಕು ದಿನದ ಹಿಂದೆ ನಡೆದ ಚಿರತೆ ದಾಳಿಯ ಬಳಿಕ ಚಿಕ್ಕಬೆಳ್ಳಾವಿ ಪರಿಸರದಲ್ಲಿ ಭಾರಿ ಆತಂಕ ನೆಲೆ ಮಾಡಿತ್ತು. ಚಿರತೆಯನ್ನು ಹೇಗಾದರೂ ಮಾಡಿ ಬಂಧಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಮೊರೆ ಹೊಕ್ಕಿದ್ದರು. ಚಿರತೆಯ ಚಲನವಲನದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವಿಯಂತೆ ಗ್ರಾಮದ ಹೊರವಲಯದ ಕೋಳಿ ಫಾರ್ಮ್ ಬಳಿ ಬೋನು ಇರಿಸಿದ್ದರು.

ಶನಿವಾರ ಬೆಳಗ್ಗಿನ ಜಾವ ಕೊನೆಗೂ ಚಿರತೆ ಈ ಬೋನಿಗೆ ಬಿದ್ದಿದೆ. ಸುಮಾರು ಮೂರು- ನಾಲ್ಕು ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಅದೀಗ ಸೆರೆ ಸಿಕ್ಕಿ ವ್ಯಗ್ರವಾಗಿದೆ. ಬೆಳ್ಳಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ದಾಳಿ ನಡೆಸುತ್ತಾ ಸಾರ್ವಜನಿಕರನ್ನು ಕಂಗೆಡಿಸಿದ್ದ ಚಿರತೆಯ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆರ್ ಎಫ್ಓ ಪವಿತ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ನಾಲ್ಕು ದಿನದ ಹಿಂದೆ ಅಂಗಣದಲ್ಲಿ ಏನಾಗಿತ್ತು?

ತುಮಕೂರು ಜಿಲ್ಲೆ ಮತ್ತು ಅದೇ ತಾಲೂಕಿನ ಬೆಳ್ಳಾವಿ ಗ್ರಾಮದ ನಿವಾಸಿಗಳಾದ ರಾಕೇಶ್‌ ಮತ್ತು ಹರ್ಷಿತಾ ಅವರದು ಕಾಡಂಚಿನ ಮನೆ. ದಂಪತಿಯ ಮಗಳು ಏಳು ವರ್ಷದ ಲೇಖನ ಮಂಗಳವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆಗ ಒಮ್ಮಿಂದೊಮ್ಮೆಗೇ ಚಿರತೆಯೊಂದು ಓಡಿ ಬಂದು ಅಂಗಳದಲ್ಲಿದ್ದ ಲೇಖನ ಮೇಲೆ ದಾಳಿ ಮಾಡಿದೆ. ಲೇಖನ ಒಮ್ಮೆಗೇ ಕಿಟಾರನೆ ಕಿರುಚಿಕೊಂಡಿದ್ದಾರೆ. ಆಗ ಮನೆಯ ಜಗಲಿಯಲ್ಲಿದ್ದ ರಾಕೇಶ್‌ ಹೊರಗೆ ಇಣುಕಿದ್ದಾರೆ. ಅವರ ಕಣ್ಣೆದುರೇ ಚಿರತೆ ಅವಳ ಮಗಳ ಮೇಲೆ ಜಿಗಿದಿತ್ತು.

ಒಂದು ಕ್ಷಣವೂ ಯೋಚಿಸದೆ ರಾಕೇಶ್‌ ಅಂಗಳಕ್ಕೆ ಜಿಗಿದೇ ಬಿಟ್ಟರು. ಅಲ್ಲೇ ಇದ್ದ ಒಂದು ದೊಣ್ಣೆಯನ್ನು ಎತ್ತಿಕೊಂಡು ಜೋರಾಗಿ ಕೂಗಿದರು. ಅದಕ್ಕೆ ಹೊಡೆಯುವಂತೆ ಮುನ್ನುಗ್ಗಿದರು. ಮಗಳನ್ನು ರಕ್ಷಿಸಬೇಕು ಎಂಬ ತಹತಹದಲ್ಲಿದ್ದ ಅಪ್ಪನ ಕಣ್ಣಿನ ಆ ಆಕ್ರೋಶವನ್ನು ಬಹುಶಃ ಚಿರತೆಯೂ ಗಮನಿಸಿರಬೇಕು. ರಾಕೇಶ್‌ ದೊಡ್ಡ ಬಡಿಗೆಯನ್ನು ಹಿಡಿದು ಮುನ್ನುಗ್ಗುತ್ತಿದ್ದಂತೆಯೇ ಭಯಗೊಂಡ ಚಿರತೆ ಮಗುವನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ಬಳಿಕ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿರತೆಯ ಬಲಿಷ್ಠ ಉಗುರುಗಳು ಆಕೆಯ ಕಾಲಿನಲ್ಲಿ ಅಚ್ಚೊತ್ತಿತ್ತು.

ಇದನ್ನೂ ಓದಿ: Leopard Attack : ದಾಳಿ ಮಾಡಿದ ಚಿರತೆಯನ್ನು ಹಿಮ್ಮೆಟ್ಟಿಸಿ ಪುಟ್ಟ ಮಗಳನ್ನು ರಕ್ಷಿಸಿದ ಅಪ್ಪ

ಚಾಮರಾಜ ನಗರದಲ್ಲಿ ಪ್ರಾಣವೇ ಹೋಗಿತ್ತು

ಇಂಥಹುದೇ ಚಿರತೆ ದಾಳಿಯ ಇನ್ನೊಂದು ಪ್ರಕರಣ ಕೆಲವು ತಿಂಗಳ ಹಿಂದೆ ಚಾಮರಾಜ ನಗರದ ಹನೂರಿನ ಕಗ್ಗಲಿಹುಂಡಿಯಲ್ಲಿ ನಡೆದಿತ್ತು. ಚಿರತೆ ಶಾಲಿನಿ ಎಂಬ ಆರು ವರ್ಷದ ಮಗುವಿನ ಮೇಲೆ ದಾಳಿ ಮಾಡಿತ್ತು. ಅಂದು ಮಗು ಹೇಗೋ ಚಿರತೆ ದಾಳಿಯಿಂದ ಬಚಾವಾಗಿತ್ತು. ಆದರೆ, ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿತ್ತು.

Exit mobile version