Site icon Vistara News

Leopard Death : ನಾಯಿಗಳ ದಾಳಿಯಿಂದ ಚಿರತೆ ಮರಿ ಸಾವು, ಇನ್ನೊಂದು ಕರೆಂಟ್‌ ಶಾಕ್‌ಗೆ ಬಲಿ

Leopard death

ತುಮಕೂರು: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯಿಂದ (Leopard Attack) ಸಾವು ಸಂಭವಿಸಿದ್ದನ್ನೇ ಕೇಳುತ್ತಿದ್ದೇವೆ. ಆದರೆ ಶುಕ್ರವಾರ ಎರಡು ಪ್ರಕರಣಗಳಲ್ಲಿ ಚಿರತೆಗಳೇ ಪ್ರಾಣ (Leopard death) ಬಿಟ್ಟಿವೆ. ಒಂದು ಪ್ರಕರಣದಲ್ಲಿ ನಾಯಿಗಳ ದಾಳಿಗೆ ಚಿರತೆ ಮರಿಯೊಂದು ಪ್ರಾಣ (leopard dies of Leopard attack) ಕಳೆದುಕೊಂಡಿದ್ದರೆ, ಇನ್ನೊಂದು ಪ್ರಕರಣದಲ್ಲಿ ಚಿರತೆಯೊಂದು ಬೇರೆ ಪ್ರಾಣಿಯನ್ನು ಹಿಡಿಯಲು ವಿದ್ಯುದಾಘಾತಕ್ಕೆ (Leopard Electricuted) ಸಿಲುಕಿ ಮೃತಪಟ್ಟಿದೆ.

ನಾಯಿಗಳ ದಾಳಿಗೆ ಎಂಟು ತಿಂಗಳ ಚಿರತೆ ಮರಿ ಸಾವು

ತುಮಕೂರು ತಾಲೂಕಿನ ಮಾವುಕೆರೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮರಿಯೊಂದು ಅಂತಿಮವಾಗಿ ನಾಯಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಕೋರಾ ಹೋಬಳಿ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಸುಮಾರು ಎಂಟು ತಿಂಗಳ ಚಿರತೆ ರಾತ್ರೋರಾತ್ರಿ ನಾಯಿಗಳ ದಾಳಿಗೆ ಪ್ರಾಣ ಬಿಟ್ಟಿದೆ.

ಚಿರತೆ ಮರಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಜನರು ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ. ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಚಿರತೆ ಸಾವಿಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಚಿರತೆ ಮರಿ ನಾಯಿಗಳ ಗುಂಪಿನ ಜತೆ ಕಾದಾಡುತ್ತಿತ್ತು. ಈ ವೇಳೆ ಅದು ಗಾಯಗೊಂಡು ಓಡಿ ಹೋಗಿದೆ ಎನ್ನಲಾಗಿದೆ. ಬಳಿಕ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಪರೀಕ್ಷಾ ವರದಿಯಲ್ಲಿ ನಾಯಿಗಳ ದಾಳಿಗೆ ಚಿರತೆ ಮರಿ ಸಾವು ಕಂಡಿರುವುದು ದೃಢವಾಗಿದೆ.

ಶಿರಸಿ ಬಳಿ ವಿದ್ಯುತ್‌ ಸ್ಪರ್ಶಿಸಿ ಚಿರತೆ ಸಾವು

ಬೇಟೆ ಅರಸಿ ಬಂದ ಚಿರತೆಯೊಂದು ವಿದ್ಯುತ್‌ ಸ್ಪರ್ಶಿಸಿ ಸಾವು ಕಂಡಿರುವ ಘಟನೆ ಶಿರಸಿ ತಾಲೂಕಿನ ಬೆಳಗಲಮನೆ ಗ್ರಾಮದಲ್ಲಿ ನಡೆದಿದೆ. ಕಾಡು ಬೆಕ್ಕು ಭೇಟೆಯಾಡಲು ಬಂದ ಚಿರತೆ ಮರ ಹತ್ತಿ ಕಾಡು ಬೆಕ್ಕಿನ ಮೇಲೆ ಜಿಗಿದಿದೆ. ಈ ವೇಳೆ ಅದು ವಿದ್ಯುತ್ ಕಂಬದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಹೈ ಟೆನ್ಷನ್ ಕೇಬಲ್ ಕಂಬದಲ್ಲೇ ಚಿರತೆ ಪ್ರಾಣ ಬಿಟ್ಟಿದೆ. ಶಿರಸಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಾನ್ವಿಯಲ್ಲಿ ಹಟ್ಟಿಗೇ ನುಗ್ಗಿದ ಚಿರತೆ: ಎಳೆ ಕರು ಸಾವು

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ದನದ ಕೊಟ್ಟಿಗೆ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಎಳೆಯ ಕರು ಮೃತಪಟ್ಟಿದೆ.

ಸಿಂಧನೂರು ರಸ್ತೆ ಹೆದ್ದಾರಿ ಪಕ್ಕದಲ್ಲಿರುವ ದುರ್ಗಮ್ಮ ಎಂಬುವವರ ದನದ ಕೊಟ್ಟಿಗೆ ಮೇಲೆ ದಾಳಿ ನಡೆದಿದೆ. ಇಲ್ಲಿನ ಮಲ್ಲಿಕಾರ್ಜುನ ಗುಡ್ಡ,ಬಾಲ ನಗರ ಗುಡ್ಡದಲ್ಲಿ 3-4 ತಿಂಗಳುಗಳಿಂದ ಚಿರತೆ ವಾಸವಾಗಿರುವ ಮಾಹಿತಿ ಇತ್ತು. ಚಿರತೆ ವಾಸವಿರುವ ಕೂಗಳತೆ ದೂರದಲ್ಲಿ ಜನ ವಸತಿ ಇದೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಹಿಡಿಯಲು ಗುಡ್ಡಗಾಡಿನಲ್ಲಿ ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದರು, ಬೋನು ಇಟ್ಟಿದ್ದರು. ತಡರಾತ್ರಿ ಅರಣ್ಯ ಅಧಿಕಾರಿಗಳ ಕಣ್ಣಿಗೂ ಚಿರತೆ ಕಂಡಿದೆ. ಆದರೆ, ಎಲ್ಲರ ದಿಕ್ಕು ತಪ್ಪಿಸಿ ಕೊಠಡಿಗೆ ನುಗ್ಗಿ ಎಳೆಯ ಕರುವಿನ ಪ್ರಾಣ ತೆಗೆದಿದೆ.

Exit mobile version