Site icon Vistara News

Marriage Cancel : ಫೋಟೊಗೆ ಕಿಲಕಿಲನೇ ನಕ್ಕಳು; ತಾಳಿ ಕಟ್ಟೋ ವೇಳೆ ಹಸೆ‌ಮಣೆಯಿಂದ ಎದ್ದಳು!

Marriage breaks down in Tumkur, Bride Divya Rejected marriage

ತುಮಕೂರು: ತಾಳಿ ಕಟ್ಟುವ ಶುಭ ವೇಳೆಯಲ್ಲಿ ಕೈನಲ್ಲಿ ಹೂವಿನ ಮಾಲೆ ಹಿಡಿದು ವಧು-ವರ ನಿಂತಿದ್ದರು. ಇನ್ನೇನು ಗಟ್ಟಿಮೇಳ ಬಾರಿಸಲು ವಾದ್ಯದವರು ರೆಡಿ ಇದ್ದರೂ, ವರ ತಾಳಿಕಟ್ಟಬೇಕು ಎನ್ನುಷ್ಟರಲ್ಲಿ ಮದುವೆಯೇ ಮುರಿದು ಬಿದ್ದಿದೆ. ಪ್ರೀತಿಸಿದ ಹುಡುಗನನ್ನು (Love case) ಬಿಟ್ಟಲಾರೇ ಎಂದು ಯುವತಿಯೊಬ್ಬಳು ಮದುವೆಯನ್ನು (Marriage Cancel) ಮುರಿದಿದ್ದಾಳೆ. ಅದು ಕೂಡ ವರ ತಾಳಿ ಕಟ್ಟಲು ಹತ್ತಿರ ಬರುತ್ತಿದ್ದಂತೆ ಹಸೆ‌ಮಣೆಯಿಂದ ಎದ್ದು ಹೋಗಿದ್ದಾಳೆ.

ತುಮಕೂರು ಜಿಲ್ಲೆ‌ಯ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದ ಕೆ.ಸಿ.ಎನ್.ಕನ್ವೆನ್ಷನ್ ಹಾಲ್‌ನಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಅವರ ಪುತ್ರ ವೆಂಕಟೇಶ್‌ ಜತೆಗೆ ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಅಂಜನಮ್ಮ ಹಾಗೂ ನರಸಿಂಹಮೂರ್ತಿ ಅವರ ಪುತ್ರಿ ದಿವ್ಯಾಳಿಗೆ ಮದುವೆ ನಿಶ್ಚಿಯಿಸಲಾಗಿತ್ತು.

ಇದನ್ನೂ ಓದಿ: Ganesha Festival : ಗಣೇಶ ಕೂರಿಸುವ ವಿಚಾರಕ್ಕೆ ಕಿರಿಕ್‌; ಯುವಕನಿಗೆ ಚಾಕು ಇರಿತ

ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ತಯಾರಿಯನ್ನು ನಡೆಸಲಾಗಿತ್ತು. ಶನಿವಾರ (ಆ.26) ರಾತ್ರಿ ಆರತಕ್ಷತೆಯಂದು ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟ ದಿವ್ಯಾ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮದುವೆ ಬೇಡ ಎಂದಿದ್ದಾಳೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಹೀಗಾಗಿ ಈ ಮದುವೆ ಮಾಡಿಕೊಳ್ಳಲು ಆಗದು ಎಂದು ಗೋಳಾಡುತ್ತಾ ಕಣ್ಣೀರು ಹಾಕಿದ್ದಾಳೆ.

ಭಾನುವಾರ ಬೆಳಗ್ಗೆ 9ರಿಂದ 9.35ಕ್ಕೆ ಮುಹೂರ್ತ ಇತ್ತು. ಸಮಯ ಹತ್ತಿರ ಬರುತ್ತಿದ್ದಂತೆ ಮದುವೆ ಬೇಡ ಎಂದಿದ್ದಾಳೆ. ವಧು ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಎರಡು ಕುಟುಂಬಗಳ ನಡುವೆ ಗದ್ದಲ ಶುರುವಾಗಿದೆ. ಮಗಳ ನಿರ್ಧಾರಕ್ಕೆ ಪೋಷಕರು ದಂಗಾಗಿದ್ದು, ಇತ್ತ ತಾಳಿ ಕೈಯಲ್ಲಿ ಹಿಡಿದ ವರ ಪೇಚಿಗೆ ಸಿಲಿಕಿದ್ದ. ಸದ್ಯ ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆದಿದ್ದು, ಮದುವೆ ಗಲಾಟೆ ಕೊಳಾಲ‌ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

ಪೋಷಕರ ವಿರೋಧದ ನಡುವೆಯೂ ಪ್ರಿಯಕರನೊಂದಿಗೆ ಹೆಜ್ಜೆ ಹಾಕಿದ ದಿವ್ಯಾ

ಪ್ರಿಯಕರನೊಂದಿಗೆ ಹೆಜ್ಜೆ ಹಾಕಿದ ದಿವ್ಯಾ

ಮದುವೆ ಗಲಾಟೆ ಪ್ರಕರಣವು ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಸುಖ್ಯಾಂತವಾಗಿದೆ. ಪೋಷಕರು ಎಷ್ಟು ಹೇಳಿದರೂ ಕೇಳದೆ ಪ್ರಿಯಕರನ ಜತೆ ಹೋಗುವುದಾಗಿ ದಿವ್ಯಾ ಪಟ್ಟು ಹಿಡಿದಳು. ಹೀಗಾಗಿ ಪ್ರಿಯಕರ ನಾಗೇಶ್ ಜತೆಗೆ ಕಳುಹಿಸಿಕೊಟ್ಟಿದ್ದಾರೆ. ಇತ್ತ ಹುಡುಗಿ ಜೊತೆ ಮದುವೆ ಸಂಬಂಧ ಮುಂದುವರೆಸಲು ವರ ಹಾಗೂ ಕುಟುಂಬಸ್ಥರು ನಿರಾಕರಿಸಿದ್ದಾರೆ. ಮದುವೆಗಾಗಿ ಖರ್ಚು ಮಾಡಿದ್ದ ವರನ ಕಡೆಯವರಿಗೆ ಒಂದು ಲಕ್ಷ ಹಣ ನೀಡಲು ದಿವ್ಯಾ ತಂದೆ ಒಪ್ಪಿಗೆ ನೀಡಿದ್ದಾರೆ. ವಧುವಿಗೆ ನೀಡಿದ್ದ ಚಿನ್ನಾಭರಣವನ್ನೂ ವಾಪಸ್ ನೀಡಿದ್ದಾರೆ. ಮದುವೆ ಮುರಿದು ಬೀಳುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರೆಲ್ಲರೂ ತಮ್ಮ ತಮ್ಮ ಮನೆಗಳತ್ತ ತೆರಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version