Site icon Vistara News

Medical Negligence : ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರ ಸಾವು; ಕರ್ತವ್ಯ ಲೋಪದಡಿ ಮೂವರು ಸಿಬ್ಬಂದಿ ವಜಾ

3 Woman Death In Tumkurs Pavagada Hospital Three staff members sacked

ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ (Medical Negligence) ಸಾವನ್ನಪ್ಪಿದ್ದ ಘಟನೆ ತುಮಕೂರಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಮೂವರು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ವಜಾ ಮಾಡಲಾಗಿದೆ. ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ತ್ರೀ ರೋಗ ತಜ್ಞೆ ಡಾ. ಪೂಜಾ, ಶುಶ್ರೂಷಣಾಧಿಕಾರಿ ಪದ್ಮಾವತಿ. ಜಿ ಹಾಗೂ ಒ.ಟಿ ತಂತ್ರಜ್ಞ ಕಿರಣ್ ಎಂಬುವವರನ್ನು ವಜಾಗೊಳಿಸಿ ಜಿಲ್ಲಾ ಆರೋಗ್ಯ ಸಂಘ ಆದೇಶ ಹೊರಡಿಸಿದೆ.

ಕಳೆದ ಫೆ. 22 ರಂದು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 7 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಇದರ ಪೈಕಿ ಶಸ್ತ್ರಾಚಿಕಿತ್ಸಾ ಕೊಠಡಿ ಒಂದರಲ್ಲಿ ನಡೆಸಿದ ನಾಲ್ಕು ಶಸ್ತ್ರಚಿಕಿತ್ಸೆ ಆದ ರೋಗಿಗಳ ಪೈಕಿ ಮೂರು ಮೃತಪಟ್ಟಿದ್ದರು. ಅನಿತ (30), ಅಂಜಲಿ (20) ಹಾಗೂ ನರಸಮ್ಮ (40) ಎಂಬುವವರು ಶಸ್ತ್ರಚಿಕಿತ್ಸೆ ನಡೆದ ಒಂದೇ ವಾರದಲ್ಲಿ ಮೃತಪಟ್ಟಿದ್ದರು.

ತನಿಖಾ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಗಳಲ್ಲಿ ಸೋಂಕು ಹರಡಿರುವ ಚಿಹ್ನೆಗಳು ಕಂಡು ಬಂದಿತ್ತು. ಸಾಮಾನ್ಯವಾಗಿ ಈ ರೀತಿಯ ಸೋಂಕು ಶಸ್ತ್ರಚಿಕಿತ್ಸಾ ಕೊಠಡಿ ಧೂಮಿಕರಣ ಮಾಡದೇ ಇದ್ದಾಗ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಲಕರಣೆಗಳನ್ನು ಆಟೋ ಕ್ಲೇವ್ ( AUTO CLAVE) ಮಾಡದೇ ಇದ್ದಾಗ ಈ ರೀತಿಯ ಸೋಂಕು ಹರಡುವ ಸಾಧ್ಯತೆ ಇದೆ. ಈ ಕಾರಣದಿಂದ ಕರ್ತವ್ಯ ಲೋಪ, ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಸಂಘದ ಕರಾರಿನ ಪ್ರಕಾರ ಮೂವರನ್ನು ವಜಾಗೊಳಿಸಿ ಆದೇಶಿಸಲಾಗಿದೆ.

ಆಡಳಿತ ವೈದ್ಯಾಧಿಕಾರಿ ಎತ್ತಂಗಡಿ

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎತ್ತಂಗಡಿ ಮಾಡಲಾಗಿದೆ. ಪಾವಗಡ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞರಾಗಿದ್ದ ಡಾ.ಕಿರಣ್. ಜಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಎ.ಎಸ್.ಎಲ್ ಬಾಬು ಅವರಿಗೆ ಪ್ರಭಾರ ವಹಿಸಿ ಆದೇಶಿಸಲಾಗಿದೆ.

ಜತೆಗೆ ಪಾವಗಡ ಸರ್ಕಾರಿ ಆಸ್ಪತ್ರೆಯ ಮತ್ತಿಬ್ಬರು ಸಿಬ್ಬಂದಿಯ ತಲೆದಂಡವಾಗಿದೆ. ಶುಶ್ರೂಷಕಿಯರಾದ ನಾಗರತ್ನಮ್ಮ ಮತ್ತು ಮಾರಕ್ಕ ಅವರನ್ನು ಅಮಾನತುಗೊಳಿಸಿ ಡಿಎಚ್‌ಓ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Drowned in River : ಕಾಲು ಜಾರಿ ಕೆರೆಗೆ ಬಿದ್ದ ಅಕ್ಕ ಸಾವು, ತಂಗಿ ಬಚಾವ್

ಏನಿದು ಪ್ರಕರಣ?

ಸಂತಾನಶಕ್ತಿ ಹರಣ ಸೇರಿ ವಿವಿಧ ಶಸ್ತ್ರಚಿಕಿತ್ಸೆಗೆ (Sterilisation surgery) ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ (Medical Negligence) ಮೃತಪಟ್ಟಿದ್ದರು. ಮಹಿಳೆಯರ ಸಾವಿಗೆ ಪಾವಗಡ ತಾಯಿ ಮಕ್ಕಳ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು. ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಎಂಬುವವರು ಮೃತಪಟ್ಟಿದ್ದರು.

ಈ ಮೂವರು ಫೆ.22 ರಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ದಿನವೇ ಅನಿತಾ ಫೆ.22 ರಂದು ಮೃತಪಟ್ಟರೆ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಂಜಲಿ ಹಾಗೂ ನರಸಮ್ಮ ಎಂಬುವವರು ಫೆ.25ರಂದು ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿತ್ತು. ರೊಚ್ಚಿಗೆದ್ದ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು, ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version