ತುಮಕೂರು: ಸಂತಾನಶಕ್ತಿ ಹರಣ ಸೇರಿ ವಿವಿಧ ಶಸ್ತ್ರಚಿಕಿತ್ಸೆಗೆ (Sterilisation surgery) ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ (Medical Negligence) ಮೃತಪಟ್ಟಿದ್ದಾರೆ. ಮಹಿಳೆಯರ ಸಾವಿಗೆ ಪಾವಗಡ ತಾಯಿ ಮಕ್ಕಳ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಮೃತ ದುರ್ದೈವಿಗಳು.
ಈ ಮೂವರು ಫೆ.22 ರಂದು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ದಿನವೇ ಅನಿತಾ ಫೆ.22 ರಂದು ಮೃತಪಟ್ಟರೆ, ಫೆ.24ರಂದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಂಜಲಿ ಹಾಗೂ ನರಸಮ್ಮ ಎಂಬುವವರು ಫೆ.25ರಂದು ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ರೊಚ್ಚಿಗೆದ್ದ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು, ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಪಾವಗಡ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಬಂಧ ಡಿಎಚ್ಓ ಡಾ.ಮಂಜುನಾಥ ಪ್ರತಿಕ್ರಿಯಿಸಿದ್ದಾರೆ. ಫೆ.22 ರಂದು ಶಸ್ತ್ರಚಿಕಿತ್ಸೆ ನಡೆದಿದೆ. ಒಟ್ಟು 7 ಜನರಿಗೆ ಸಂತಾನಹರಣ, ಸಿಸೆರಿಯನ್ ಮತ್ತು ಗರ್ಭಕೋಶದ ಆಪರೇಶನ್ ನಡೆದಿತ್ತು. ಆಪರೇಷನ್ ನಡೆದ ದಿನವೇ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವನಪ್ಪಿದ್ದಾಳೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಬ್ಬಾಕೆ ಶುಕ್ರವಾರ ಮತ್ತು ಮತ್ತೊಬ್ಬರು ಶನಿವಾರ ಅಸುನೀಗಿದ್ದಾರೆ. ಈ ದಾರುಣ ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಹೇಳು ಆಗುವುದಿಲ್ಲ. ಆಪರೇಷನ್ ಥೀಯೇಟರ್ ಶುಚಿತ್ವ ಇಲ್ಲದಿರುವುದು ಕಾರಣ ಇರಬಹುದು. ಆಪರೇಷನ್ ಥೀಯೇಟರ್‌ನಲ್ಲಿ ಸ್ಟೆಫೆಲೋ ಕಾಕಲ್ ಬ್ಯಾಕ್ಟೀರಿಯಾದಿಂದ ಆಗಿರುವ ಶಂಕೆ ಇದೆ. ಯಾರಿಗೂ ರಕ್ತಸ್ರಾವ ಆಗಿಲ್ಲ. ಬೆಂಗಳೂರಿನಿಂದ ತನಿಖಾ ತಂಡ ಬಂದು ಸ್ಯಾಂಪಲ್ ತೆಗೆದುಕೊಂಡು ಹೋಗಿದೆ. ವರದಿ ಆಧರಿಸಿ ಆಸ್ಪತ್ರೆ ವೈದ್ಯರು ಸೇರಿದಂತೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: Drowned in River : ಕಾವೇರಿ ನದಿಗಿಳಿದ ವಿದ್ಯಾರ್ಥಿ ಈಜಲು ಬಾರದೆ ನೀರುಪಾಲು
ಮೂರ್ಛೆ ಕಾಯಿಲೆ ಎಂದು ಆಸ್ಪತ್ರೆಗೆ ಹೋದ ಮಗು ಸಾವು
ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಒಂದುವರೆ ವರ್ಷದ ಮಗು ಮೃತಪಟ್ಟಿದೆ. ಕೋಲಾರದ ವಾನರಾಶಿ ಗ್ರಾಮದ ಆಂಜನಪ್ಪ ಹಾಗೂ ಮೌನಿಕಾ ದಂಪತಿಯ ಮಗು ವಿಹಾನ್ ಮೃತಪಟ್ಟಿದೆ.
ಮೂರ್ಛೆ ಕಾಯಿಲೆ ಎಂದು ಎರಡು ದಿನದ ಹಿಂದೆ ಕೋಲಾರದ ಕುವೆಂಪು ನಗರದಲ್ಲಿರುವ ವಂಶೋದಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಏಕಾಏಕಿ ಮಗು ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದೆ ಎಂದು ಆರೋಪಿಸಿದರು. ಪೋಷಕರು ಹಾಗೂ ದಲಿತ ಮುಖಂಡರು ಆಸ್ಪತ್ರೆ ಎದುರು ಮಗು ಶವ ಪಡೆಯದೆ ಪ್ರತಿಭಟನೆ ನಡೆಸಿದರು. ವಂಶೋದಯ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ಕಿಡಿಕಾರಿದರು. ಸ್ಥಳಕ್ಕೆ ಕೋಲಾರ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ