ಹಾಸನ/ತುಮಕೂರು: ನಾಪತ್ತೆಯಾಗಿದ್ದ ಹುಳಿಯಾರು ಠಾಣೆಯ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸುಧಾ ಎಸ್. ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಅವರ ಚಿಕ್ಕಪ್ಪನ ಮಗನೇ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಧಾ ಅವರು ಸೆ. ೧೩ರಂದು ಮಧ್ಯಾಹ್ನ ೩ ಗಂಟೆಗೆ ಡ್ಯೂಟಿ ಮುಗಿಸಿ ತೆರಳಿದ್ದರು. ಆದರೆ, ಮನೆಗೆ ಬಾರದೆ ಇದ್ದುದರಿಂದ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸುಧಾ ಅವರಿಗೆ 14 ವರ್ಷದ ಗಂಡು ಮಗ ಹಾಗೂ 10 ವರ್ಷದ ಹೆಣ್ಣು ಮಗಳಿದ್ದಾರೆ. 2 ವರ್ಷದ ಹಿಂದೆ ಪತಿ ಮೃತಪಟ್ಟಿದ್ದರು. ಕಳೆದ ಒಂದೂವರೆ ವರ್ಷದಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸುಧಾ ಕರ್ತವ್ಯ ನಿರ್ವಹಿಸುತ್ತಿದ್ದರು.
ಶವವಾಗಿ ಪತ್ತೆಯಾದವರು ಸುಧಾ
ಈ ನಡುವೆ ಅವರು ಪೊದೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಅವರ ಶವ ಸಿಕ್ಕಿದೆ.
ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಸುಧಾರನ್ನು ಆಕೆಯ ಚಿಕ್ಕಪ್ಪನ ಮಗ ಮಂಜುನಾಥನೇ ಕಾರಿನಲ್ಲಿ ಕರೆದುಕೊಂಡು ಬಂದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಏನೋ ತಗಾದೆ ಇದ್ದು ಈ ವಿಚಾರದಲ್ಲಿ ಮಾತನಾಡಲೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಂಜುನಾಥನೂ ಪ್ರಾಣ ಕಳೆದುಕೊಂಡ
ಈ ನಡುವೆ, ಸುಧಾ ಅವರನ್ನು ಕೊಲೆ ಮಾಡಿದ ಮಂಜುನಾಥ ಶುಕ್ರವಾರ ಸಂಜೆ ಶಿವಮೊಗ್ಗದ ಲಾಡ್ಜ್ ಒಂದರಲ್ಲಿ ವಿಷ ಕುಡಿದು ಮೃತಪಟ್ಟಿದ್ದಾನೆ. ಅಲ್ಲಿ ಸಾಯುವ ಮುನ್ನ ಆತ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ತಾನು ಸುಧಾ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈ ಡೆತ್ ನೋಟ್ ಆಧರಿಸಿಯೇ ಸುಧಾ ಮೃತದೇಹವನ್ನು ಪತ್ತೆಹಚ್ಚಲಾಗಿದೆ.
ಡೆತ್ ನೋಟ್ ಮಾಹಿತಿ ಆಧರಿಸಿ ಅರಸೀಕೆರೆ ಗ್ರಾಮಾಂತರ ಹಾಗೂ ತುಮಕೂರು ಪೊಲೀಸರು ಮೈಲನಹಳ್ಳಿಯ ಪೊದೆಯೊಂದರ ಬಳಿ ಶವವನ್ನು ಪತ್ತೆ ಮಾಡಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.