Site icon Vistara News

BCM Hostel : ಹಾಸ್ಟೆಲ್‌ಗೆ ಸಿದ್ದಗಂಗಾ ಮಠದಿಂದ ಅಕ್ಕಿ; ಇನ್ನೊಬ್ಬ ಅಧಿಕಾರಿ ತಲೆದಂಡ

BCM Hostel Case Officer Transfer

ತುಮಕೂರು: ತುಮಕೂರು ಜಿಲ್ಲೆಯ (Tumkur News) ಹಿಂದುಳಿದ ವರ್ಗಗಳ ಹಾಸ್ಟೆಲ್​ಗೆ (BCM Hostel) ಸಿದ್ಧಗಂಗಾ ಮಠದಿಂದ ಅಕ್ಕಿ (Rice from Siddaganga Matt) ಎರವಲು ಪಡೆದು ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ (Karnataka Government) ಮತ್ತೊಬ್ಬ ಅಧಿಕಾರಿಯ ತಲೆದಂಡ ಪಡೆದಿದೆ. ಮಂಗಳವಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಿದ್ದ ಸರ್ಕಾರ ಇದೀಗ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ ಎತ್ತಂಗಡಿ (Office transfer) ಮಾಡಿದೆ. ಅಂದರೆ ಈಗ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಬ್ಬರೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಂತಾಗಿದೆ.

ರಾಜ್ಯ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಅಕ್ಕಿಯನ್ನು ಸರಬರಾಜು ಮಾಡಿದ್ದರೂ ಅದನ್ನು ಸೂಕ್ತ ಸಮಯದಲ್ಲಿ ಬಿಸಿಎಂ ಹಾಸ್ಟೆಲ್‌ ಸರಬರಾಜು ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಗಂಗಪ್ಪ ಅವರ ಸ್ಥಾನಕ್ಕೆ ಸೋನಿಯಾ ವರ್ಣೇಕರ್‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆಗಿರುವ ಹೇಮಲತಾ ಎಂ. ಅವರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ ಅವರ ವರ್ಗಾವಣೆಗೆ ಆದೇಶ ಹೊರಡಿಸಿದ್ದಾರೆ. ಗಂಗಪ್ಪ ಅ ಮಾತೃ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶ ನೀಡಲಾಗಿದೆ. ಗಂಗಪ್ಪ ಅವರ ಸ್ಥಾನಕ್ಕೆ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿದ್ದ ಸೋನಿಯಾ ವರ್ಣಿಕರ್ ಅವರನ್ನು ನೇಮಕ ಮಾಡಲಾಗಿದೆ.

ಏನಿದು ಪ್ರಕರಣ?

ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆಯಲಾಗಿತ್ತು. ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳಿಗೆ ಸರ್ಕಾರದಿಂದ ಸಕಾಲಕ್ಕೆ ರೇಷನ್ ಪೂರೈಕೆಯಾಗುತ್ತಿಲ್ಲ. ಆದರೆ, ಮಕ್ಕಳನ್ನು ಹೊಟ್ಟೆಗಿಲ್ಲದೆ ಕೂರಿಸಲು ಸಾಧ್ಯವೇ? ಆ ಸಕಾರಣದಿಂದ ಬಿಸಿಎಂ ಇಲಾಖೆ ಅಧಿಕಾರಿಗಳು ಸಿದ್ದಗಂಗಾ ಮಠದಿಂದ ಅಕ್ಕಿ ದಾಸ್ತಾನು ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 500 ಚೀಲ ಅಕ್ಕಿಯನ್ನು ಸಾಲವಾಗಿ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು.

ಮಠದ ಆಡಳಿತಾಧಿಕಾರಿ ಸ್ಟಷ್ಟನೆ ಕೊಟ್ಟಿದ್ದರು

ಬಿಸಿಎಂ ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೊಟ್ಟಿರುವುದು ಹೌದು. ಈಗಾಗಲೇ ಈ ರೀತಿ ಎರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ ವಾಪಸ್‌ ಕೊಟ್ಟಿದ್ದಾರೆ. ಈಗ ವಾಪಸ್‌ ಕೊಡಲಾಗಿದೆಯಾ? ಇಲ್ಲವಾ? ಎಂಬ ಸಂಗತಿ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಉಗ್ರಾಣದಲ್ಲಿ ಈ ಎಲ್ಲ ಮಾಹಿತಿ ಇರುತ್ತದೆ. ನಮ್ಮ ಸಿಬ್ಬಂದಿಗೆ ಈ ವಿಷಯ ಗೊತ್ತಿರುತ್ತದೆ. ಅಕ್ಕಿ ಸಾಲದ ರೂಪದಲ್ಲಿ ಬೇಕು ಎಂದು ಕೇಳಿದಾಗ ಕೊಡಲು ನಾನು ಸೂಚನೆ ನೀಡಿದ್ದೆ. ತರುವಾಯ ಬಂತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ : ಸಿದ್ದಗಂಗಾ ಮಠದಿಂದ ಅಕ್ಕಿ ಎರವಲು ಪ್ರಕರಣ; ಕಲ್ಯಾಣಾಧಿಕಾರಿ ಗೀತಮ್ಮ ತಲೆದಂಡ

ಸಚಿವ ಶಿವರಾಜ್‌ ತಂಗಡಗಿ ಸ್ಪಷ್ಟನೆ ನೀಡಿದ್ದರು

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದರು.

ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆಯಲ್ಲಿ 111 ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಮಾಸಿಕ ಬೇಡಿಕೆಗಳಿಗೆ ಅನುಗುಣವಾಗಿ ಅಕ್ಕಿ ಮತ್ತು ಗೋಧಿ ಹಂಚಿಕೆಯಾಗಿರುತ್ತದೆ.‌ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ‌ ಅಕ್ಕಿ ಕೊರತೆ ಇಲ್ಲ. ಅಕ್ಕಿ ಇಲ್ಲ ಎಂಬ ವದಂತಿ ಬೆನ್ನಲ್ಲೇ ತುಮಕೂರಿನ ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣ ಅಧಿಕಾರಿಯಿಂದ ಕೂಡ ಮಾಹಿತಿ ಪಡೆದಿದ್ದೇನೆ. ಅಕ್ಕಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು.

Exit mobile version