ತುಮಕೂರು: ಇದು ರಕ್ಷಿಸುವವರೇ ಪ್ರಾಣ ತೆಗೆದುದಕ್ಕೆ ಹೋಲಿಸಬಹುದಾದ ಘಟನೆ. ಆಂಬ್ಯುಲೆನ್ಸ್ ಅಂದರೆ ನಮಗೆ ಪ್ರಾಣ ರಕ್ಷಣೆಯ ನೆನಪಾಗುತ್ತದೆ. ಆದರೆ, ಇಲ್ಲಿ ಅದೇ ಒಬ್ಬನ ಪ್ರಾಣ ತೆಗೆದಿದೆ. ಹಾಗಂತ, ಯಾವುದೂ ಉದ್ದೇಶಪೂರ್ವಕ ಅಲ್ಲ. ವಿಧಿ ಲಿಖಿತ ಎಂದೇ ಹೇಳಬಹುದೇನೊ! ಆಗಿದ್ದೇನೆಂದರೆ, ಆಂಬುಲೆನ್ಸ್‌ನಿಂದ ಸಿಡಿದ ಟೈರ್, ಬೈಕ್‌ಗೆ ಬಡಿದು ಬೈಕ್ ಸವಾರ ಸ್ಥಳದಲ್ಲೇ ಸಾವು (Road Accident) ಕಂಡಿದ್ದಾರೆ.
ತುಮಕೂರು-ಕೊರಟಗೆರೆ ರಸ್ತೆಯ ಗೇರಹಳ್ಳಿ ಬಳಿ ಘಟನೆ ನಡೆದಿದೆ. ಬೈಕ್ ಸವಾರ ಮಂಜು (38) ಮೃತ ದುರ್ದೈವಿ. ಮಂಜು ದಾರಿಯಲ್ಲಿ ಹೋಗುತ್ತಿದ್ದಾಗ ಅವರ ಹಿಂದಿನಿಂದ ಬರುತ್ತಿದ್ದ ಆಂಬ್ಯುಲೆನ್ಸ್‌ನಿಂದ ಟೈರ್ ಸಿಡಿದಿದೆ. ಅದು ನೇರವಾಗಿ ಬೈಕ್‌ಗೆ ಬಡಿದು ಅನಾಹುತ ಉಂಟಾಗಿದೆ.
ಇದನ್ನೂ ಓದಿ: Varthur Santhosh: ‘ಯಾವನೋ ಕಿತ್ತೋದ್ ನನ್ಮಗ’ ಹೇಳಿಕೆ; ಕ್ಷಮೆ ಕೇಳಿದ್ರೆ ಸರಿ ಎಂದು ಜಗ್ಗೇಶ್ಗೆ ಎಚ್ಚರಿಕೆ!
ಮಂಜು ಅವರಿಗೆ ಕೊರಟಗೆರೆ ಪಟ್ಟಣದಲ್ಲಿ ಸ್ಟುಡಿಯೋ ಇತ್ತು. ಹೀಗಾಗಿ ಸ್ಟುಡಿಯೋ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್ ವಾಹನದ ಟೈರ್ ಸಿಡಿದ ಪರಿಣಾಮ ಮುಂದೆ ಹೋಗುತ್ತಿದ್ದ ಬೈಕ್‌ಗೆ ಬಡಿದಿದೆ. ಈ ವೇಳೆ ಬೈಕ್‌ನ ನಿಯಂತ್ರಣ ಕಳೆದುಕೊಂಡ ಮಂಜು ರಸ್ತೆ ಬದಿಯ ಕಲ್ಲಿನ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಮಂಜು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಜು ಜತೆಗೆ ಬೈಕ್‌ನಲ್ಲಿದ್ದ ರವಿ ಎಂಬುವವರು ಸಣ್ಣ-ಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ