Site icon Vistara News

Road Accident: ಶಿರಾ ಬಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ; ನಿವೃತ್ತರಾಗಿ ಮನೆಗೆ ತೆರಳುತ್ತಿದ್ದ ಇಬ್ಬರು ಸಾವು

sira accident two death

ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ (highway accident) ಇಂದು ಬೆಳಗಿನ ಜಾವ ನಡೆದಿರುವ ಸರಣಿ ಅಪಘಾತದಲ್ಲಿ (Road accident) ಇಬ್ಬರು ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಇಂದು ಬೆಳಗಿನ ಜಾವ ಸರಣಿ ಅಪಘಾತ ಸಂಭವಿಸಿದೆ. ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಟಾಟಾ ಏಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತ ದುರ್ದೈವಿಗಳು ಕಲ್ಬುರ್ಗಿ ಜಿಲ್ಲೆ ಅರಳಗುಡಿ ಗ್ರಾಮದ ಭೀಮಾಬಾಯಿ (70), ಮಹಾಂತಪ್ಪ (50) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಇವರ ಕುಟುಂಬ ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ಮನೆಯ ಸಾಮಾನು ಸಾಗಿಸುವ ವೇಳೆ ಅಪಘಾತ ಸಂಭವಿಸಿದೆ.

ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಈ ವೇಳೆ ಮುಂದೆ ಹೋಗುತ್ತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಟಾಟಾ ಏಸ್‌ಗೆ ಖಾಸಗಿ ಬಸ್ ಬಂದು ಡಿಕ್ಕಿಯಾಗಿದೆ. ಏಸ್‌ನಲ್ಲಿದ್ದವರು ಕ್ಯಾಂಟರ್‌ ಹಾಗೂ ಬಸ್‌ ನಡುವೆ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ. ಗಾಯಾಳುಗಳಿಗೆ ಕಳ್ಳಂಬೆಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ವ್ಯತ್ಯಯ ಉಂಟಾಗಿದ್ದು, ಕಳ್ಳಂಬೆಳ್ಳ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.

ಆಂಧ್ರದಲ್ಲಿ ಅಪಘಾತ, ಹುಣಸೂರು ಅಬಕಾರಿ ಡಿಎಸ್‌ಪಿ ಗಾಯ, ತಂದೆ ಸಾವು

ಕೋಲಾರ: ಆಂದ್ರಪ್ರದೇಶದ ಚಿತ್ತೂರು ಬಳಿ ಹುಣಸೂರು ಅಬಕಾರಿ ಡಿಎಸ್‌ಪಿ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಡಿಎಸ್‌ಪಿ ತೀವ್ರ ಗಾಯಗೊಂಡಿದ್ದು, ಅವರು ತಂದೆ ಮೃತಪಟ್ಟಿದ್ದಾರೆ. ತಾಯಿ ಕೂಡ ಗಾಯಗೊಂಡಿದ್ದಾರೆ. ಚಿತ್ತೂರು ಬಳಿಯ ಪಲಮನೇರು ಮಂಡಲದ ಜಗಮರ್ಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ಹುಣಸೂರು ಅಬಕಾರಿ ಡಿಎಸ್ಪಿ ವಿಜಯ್ ಕುಮಾರ್ ಮತ್ತವರ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಿದ್ದ ಕಾರು ಕತ್ತಲಲ್ಲಿ ಕಾಣಿಸದೆ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಎಸ್ಪಿ ವಿಜಯ್ ಕುಮಾರ್ ಅವರ ತಂದೆ ಗಿರಿಗೌಡ (80) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಎಸ್ಪಿ ವಿಜಯ್ ಕುಮಾರ್ ಅವರ ಕಣ್ಣುಗಳಿಗೆ ಗಾಯವಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ತಾಯಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಅಬಕಾರಿ ಸಿಐ ಲೋಕೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಡಿಎಸ್‌ಪಿ ಕುಟುಂಬ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Exit mobile version