ತುಮಕೂರು: ನಗ್ತಾ ನಗ್ತಾ ಮಾತಾಡ್ತಾರೆ ನಮ್ ಮಿಸ್ಸು ಎನ್ನುತ್ತ ಮಕ್ಕಳಿಗೆ ಅಚ್ಚುಮೆಚ್ಚಿನ ಗುರುಗಳಾಗಬೇಕಿದ್ದ ಇಬ್ಬರು ಶಿಕ್ಷಕಿಯರ ವೈಯಕ್ತಿಕ ಜಗಳ ತಾರಕಕ್ಕೇರಿ ಸರ್ಕಾರಿ ಶಾಲೆಯೇ ಬಂದ್ ಆಗಿದೆ. ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯರ ಮಧ್ಯೆ ನಡೆಯುತ್ತಿದ್ದ ಕಲಹದಿಂದ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿದ್ದಾರೆ.
ಸಹಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಇಬ್ಬರಿಗೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ವೈಯಕ್ತಿಕ ವಿಚಾರಕ್ಕೆ ನಿತ್ಯ ಇಬ್ಬರ ಮಧ್ಯೆ ಶಾಲೆಯಲ್ಲೆ ಜಟಾಪಟಿ ನಡೆಯುತ್ತಿತ್ತು. ಶಾಲೆಗೆ ತಡವಾಗಿ ಬರುವುದೂ ನಡೆದೇ ಇತ್ತು. ಇವೆಲ್ಲವನ್ನೂ ತಾಳ್ಮೆಯಿಂದಲ್ಲೇ ಸಹಿಸಿಕೊಂಡಿದ್ದ ಗ್ರಾಮಸ್ಥರು ಶನಿವಾರ ಸಿಡೆದಿದ್ದು, ಹೀಗೆ ಪರಸ್ಪರ ಜಗಳವಾಡುತ್ತಿದ್ದರೆ ಮಕ್ಕಳಿಗೆ ಪಾಠ ಮಾಡುವವರು ಯಾರು? ಎಂದು ಪ್ರಶ್ನಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಪಾಠವಾಗಬೇಕು ಎಂದು ಆಗ್ರಹಿಸಿದ್ದಾರೆ.
ಮುಂದುವರಿದು, ಗ್ರಾಮಸ್ಥರು ಶಾಲೆಗೆ ಬೀಗ ಹಾಕುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ ಶಿಕ್ಷಕಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತಿನಂತೆ ಇವರಿಬ್ಬರ ಜಗಳದಲ್ಲಿ ಬಡವಾಗಿರುವುದು ಮಾತ್ರ ನಮ್ಮ ಮಕ್ಕಳು ಎಂದಿರುವ ಪೋಷಕರು, ವಿಚಾರ ತಿಳಿದಿರುವ ತುಮಕೂರು ಬಿಇಒ ಹನುಮನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ಎಂ.ಆರ್.ದೊರೆಸ್ವಾಮಿ ನೇಮಕ