| ಹರ್ಷ ಶಿರಸಿ, ತುಮಕೂರು
ಬಡಬಗ್ಗರ ಆಸ್ತಿಯನ್ನು ಲಪಟಾಯಿಸಿ ಹಣ ಮಾಡಿರುವವರ ಬಗ್ಗೆ ಕೇಳಿರುತ್ತೇವೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಬಳಿಕ ಅಲ್ಲಿ ಲೇಔಟ್ ಮತ್ತೊಂದು ಮಾಡಿ ಕೋಟಿ ಕೋಟಿ ರೂಪಾಯಿ ಹಣ ಬಾಚಿರುವವರನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ವಿರುದ್ಧ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಸೇರಿದ ಜಮೀನನ್ನೇ ಕಬಳಿಸಿಬಿಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತನ ಅಕ್ರಮಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ.
ದೇವಸ್ಥಾನದ 6.23 ಎಕರೆ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರುವುದರಿಂದ ಇದೇ ಜಾಗದಲ್ಲಿ ನಿರ್ಮಾಣವಾಗಿರುವ 60ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.56/2 ಹಾಗೂ 62/2ರಲ್ಲಿರುವ ಒಟ್ಟು 6.23ಗುಂಟೆ ಜಮೀನುಗಳ ಹಕ್ಕು ಬದಲಾವಣೆ ಕಾನೂನು ಬಾಹಿರವಾಗಿದೆ ಎಂದು ನಗರದ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್.ಬಸವರಾಜು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ | H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ
ಈ ದೂರಿನ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಈಗ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವ ಆಯುಕ್ತೆ ರೋಹಿಣಿ ಸಿಂಧೂರಿ, ದಾಖಲಾತಿಗಳನ್ನ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ.
ಆಸ್ತಿ ದೇವಾಲಯಕ್ಕೆ ಸೇರಿದ್ದು ಎಂದು ಜಿಲ್ಲಾ ಭೂ ಸುಧಾರಣಾ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಧೀಶ ಸದಸ್ಯರು ನೀಡಿರುವ ಆದೇಶವನ್ನೂ ಗಣನೆಗೆ ತೆಗೆದುಕೊಳ್ಳದೆ, ಕಂದಾಯ ಸದಸ್ಯರು ನೀಡಿರುವ ಆದೇಶವನ್ನು ಪರಿಗಣಿಸಿ 100 ಕೋಟಿ ರೂಪಾಯಿ ಮೌಲ್ಯದ ದೇವಾಲಯದ ಆಸ್ತಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಡಲಾಗಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಗೈರು ಹಾಜರಿ ಕಾರಣಕ್ಕೆ ವಜಾಗೊಂಡಿತ್ತು. ಇದೇ ವಜಾ ಆದೇಶದ ಆಧಾರದ ಮೇಲೆ 2005ರಲ್ಲಿ ಖಾಸಗಿಯವರಿಗೆ ಖಾತೆ ಮಾಡಿಕೊಡಲಾಗಿತ್ತು. ಬಳಿಕ ಒಂದೇ ತಿಂಗಳಿಗೆ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ. ಇದೆಲ್ಲವೂ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಬಸವರಾಜು ಆರೋಪಿಸಿದ್ದಾರೆ.
1988ರಲ್ಲಿ ಜಿಲ್ಲಾ ಭೂಸುಧಾರಣಾ ಮೇಲ್ಮನವಿ ಹೊರಡಿಸಿರುವ ಭಿನ್ನಾಭಿಪ್ರಾಯದ ಆದೇಶ ಇಂದಿಗೂ ಚಾಲ್ತಿಯಲ್ಲಿದೆ. ಹೀಗಾಗಿ ಈ ಜಮೀನು ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದೆ. ಆದರೆ, 2006ರಲ್ಲಿದ್ದ ಅಧಿಕಾರಿಗಳು ನಿಯಮ ಬಾಹಿರವಾಗಿ ಈ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ಜಮೀನಿನಲ್ಲಿ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಯೇಸುದಾಸ್ ಅವರು ಲೇಔಟ್ ನಿರ್ಮಾಣ ಮಾಡಿದ್ದಾರೆ. ಹೀಗಾಗಿ 6.23 ಎಕರೆ ವಿಸ್ತೀರ್ಣದ ಈ ಜಮೀನಿನಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಮನೆಗಳು ತಲೆಯೆತ್ತಿ ನಿಂತಿವೆ. ಆದರೆ, ಈ ಭೂ ಅಕ್ರಮ ಬೆಳಕಿಗೆ ಬಂದಿರುವುದರಿಂದ ಸಾಲ ಮೂಲ ಮಾಡಿ ಮನೆ ಕಟ್ಟಿಸಿದ್ದವರಿಗೆ ಆತಂಕ ಶುರುವಾಗಿದೆ.
ಇದನ್ನೂ ಓದಿ | Election 2023 | ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಗೆ ಸೇರ್ಪಡೆ ಮುಹೂರ್ತ ಫಿಕ್ಸ್