ತುಮಕೂರು: ಇತ್ತೀಚಿಗಷ್ಟೇ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಬೆಂಬಲಿಗನನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಗುರುರೇಣುಕಾರಾಧ್ಯ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ, ಘೋಷಣೆ ಮತ್ತು ಪಕ್ಷದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರಣ ಗುರುರೇಣುಕಾರಾಧ್ಯ ಜೆಡಿಎಸ್ ನಿಂದ ಉಚ್ಚಾಟನೆ ಮಾಡಲಾಗಿದೆ. ಈ ಕುರಿತು ತುಮಕೂರು ಜೆಡಿಎಸ್ ಅಧ್ಯಕ್ಷ ಆರ್.ಸಿ ಆಂಜಿನಪ್ಪ ಆದೇಶ ನೀಡಿದ್ದಾರೆ.
ಇದನ್ನೂ ಓದಿ| ಎಚ್ಡಿಕೆಗೆ ತಾಕತ್ತಿದ್ರೆ ಗುಬ್ಬಿಯಲ್ಲಿ ಗೆದ್ದು ತೋರಿಸಲಿ : ಶಾಸಕ ಎಸ್.ಆರ್.ಶ್ರೀನಿವಾಸ್ ಓಪನ್ ಚಾಲೆಂಜ್
“ಜಿಲ್ಲೆಯ ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿಯಲ್ಲಿ ದಿನಾಂಕ 12-06-2022 ರಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಸನ್ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ್ದೀರ. ಪಕ್ಷ ಮತ್ತು ಪಕ್ಷದ ಮುಖಂಡರ ತೇಜೋವಧೆಯನ್ನು ಮಾಡಿರುವ ವಿಚಾರಗಳು ಇತ್ತೀಚಿನ ಕೆಲವು ದಿನಪತ್ರಿಕೆಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಹಾಗೂ ಹುಬ್ಬಿ ತಾಲೂಕಿನ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರಿಂದ ದೂರುಗಳು ಬಂದಿದ್ದು, ಪಕ್ಷದ ಆದೇಶದಂತೆ ಗುರುರೇಣುಕಾರಾಧ್ಯ ಅವರನ್ನು ಪಕ್ಷದಿಂದ ಅಮಾನತು ಮಾಡಿ ಉಚ್ಚಾಟನೆ ಮಾಡಲಾಗಿದೆ” ಎಂದು ಆಂಜಿನಪ್ಪ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ತಮ್ಮ ಪರ ಮತದಾನ ಮಾಡಲಿಲ್ಲ ಎಂಬ ಕಾರಣಕ್ಕೆ ಶ್ರೀನಿವಾಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ನಂತರ ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸ್ ಮನೆಯೆದುರು ಪ್ರತಿಭಟನೆಗೆ ಮುಂದಾಗಿದ್ದರು. ಕುಮಾರಸ್ವಾಮಿಯವರ ವಿರುದ್ಧ ಶ್ರೀನಿವಾಸ್ ಏಕವಚನದಲ್ಲೆ ವಾಗ್ದಾಳಿ ಮಾಡಿದ್ದರು.
ಇದನ್ನೂ ಓದಿ| ರಾಜ್ಯಸಭೆ ಚುನಾವಣೆ | ಜೆಡಿಎಸ್ ತೆಕ್ಕೆಯಿಂದ ಹಾರಿದ ತುಮಕೂರು ʼಗುಬ್ಬಿʼ