ಹುಳಿಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ (Rural) ಭಾಗದಲ್ಲಿ ದುರ್ಬಲರನ್ನು ಹಾಗೂ ಮಹಿಳೆಯರನ್ನು ಸಂಘಟಿಸಿ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ. ದುರ್ಬಲ ವರ್ಗದ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸಿ ಆರ್ಥಿಕವಾಗಿ ಸಬಲೀಕರಣರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಸಂಘದಿಂದ ಯಶಸ್ವಿಯಾಗಿ ಸಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹುಳಿಯಾರಿನಲ್ಲಿ ನೂತನವಾಗಿ ಆರಂಭಿಸಲಾದ “ಚಿಕ್ಕನಾಯಕನಹಳ್ಳಿ-2 ಯೋಜನಾ ಕಚೇರಿಯ” ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳ ಮೂಲಕ ಸರ್ಕಾರದ ಹಾಗೂ ಬ್ಯಾಂಕಿನ ಸಹಭಾಗಿತ್ವದೊಂದಿಗೆ ಹತ್ತು ಹಲವಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿದೆ ಎಂದರು.
ಇದನ್ನೂ ಓದಿ: Viral News: ಹಸಿವಿನಿಂದ ಭಿಕ್ಷುಕ ಸಾವು; ಆತನ ಬಳಿ ಇತ್ತು 1 ಲಕ್ಷ ರೂ!
ನಮ್ಮೂರು ನಮ್ಮ ಕೆರೆ ಯೋಜನೆ ಇಡೀ ತುಮಕೂರು ಜಿಲ್ಲೆಯಲ್ಲಿ 49 ಕೆರೆಗಳನ್ನು ಸರಿಸುಮಾರು ಆರು ಕೋಟಿ ವೆಚ್ಚದಡಿ ಅಭಿವೃದ್ಧಿ ಪಡಿಸಲಾಗಿದೆ, ಶುದ್ಧ ನೀರು ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 75 ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸಲಾಗಿದೆ, ಜಿಲ್ಲೆಯ 15 ರುದ್ರ ಭೂಮಿಗಳಿಗೆ 17.5 ಲಕ್ಷ ಅನುದಾನ ನೀಡಲಾಗಿದೆ, ಧಾರ್ಮಿಕ ಕ್ಷೇತ್ರದ ಪುನಶ್ಚೇತನಕ್ಕೆ ಜಿಲ್ಲೆಯಲ್ಲಿ 12 ಕೋಟಿ ಅನುದಾನ ನೀಡಲಾಗಿದೆ, ಜಿಲ್ಲೆಯ 4,245 ಸದಸ್ಯರಿಗೆ ಉದ್ಯೋಗ ತರಬೇತಿ ನೀಡಲಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾರ್ಷಿಕ 22 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿದ್ದು ನಿತ್ಯ 100 ಕೋಟಿ ರೂಪಾಯಿಗೂ ಮೀರಿ ವ್ಯವಹಾರ ನಡೆಯುತ್ತಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ನೊಂದವರಿಗೆ ದಾರಿದೀಪವಾಗಿರುವ ಧರ್ಮಸ್ಥಳ ಸಂಘವು ಮಹಿಳೆಯರಿಗೆ ಉದ್ಯೋಗ ಹಾಗೂ ಆರ್ಥಿಕ ಸಹಾಯ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದು, ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂಳಗೊಂಡು ಅಭಿವೃದ್ಧಿ ಕೆಲಸಗಳು ಧರ್ಮಸ್ಥಳ ಸಂಘದಿಂದ ನಡೆಯುತ್ತಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ್, ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಡಗಿ ರಾಮಣ್ಣ ಮಾತನಾಡಿದರು.
ಇದನ್ನೂ ಓದಿ: Byju’s Debt: ಸಿಬ್ಬಂದಿ ಸಂಬಳಕ್ಕಾಗಿ ಮನೆ ಅಡವಿಟ್ಟ ಬೈಜೂಸ್ ಕಂಪನಿ ಮಾಲಿಕ!
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್, ಮುಖಂಡರಾದ ಶೀನಪ್ಪ, ಸೌಜನ್ಯ, ಬಡಗೀರಾಜು, ಚಂದ್ರಶೇಖರ್, ಶಿವಕುಮಾರ್, ನಂದಿಹಳ್ಳಿ ಶಿವಣ್ಣ ಹಾಗೂ ಪ್ರೇಮಾನಂದ್, ರಾಮಚಂದ್ರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು, ಇತರರು ಪಾಲ್ಗೊಂಡಿದ್ದರು.