Site icon Vistara News

Tumkur News: ದೇವಸ್ಥಾನ ಕೆಡವಿ ಮಾಲ್‌ ಕಟ್ಟಲು ಮುಂದಾದ ಪಾಲಿಕೆ, ಹಿಂದು ಸಂಘಟನೆಗಳ ವಿರೋಧ

tumkur news temple mall

ತುಮಕೂರು: ದೇವಸ್ಥಾನ (Temple) ಕೆಡವಿ ಮಾಲ್‌ (Mall) ನಿರ್ಮಾಣಕ್ಕೆ ತುಮಕೂರು ನಗರ ಪಾಲಿಕೆ (Tumkur news) ಪ್ಲಾನ್‌ ಮಾಡುತ್ತಿದ್ದು, ಇದೀಗ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಜನತೆಯ ತೀವ್ರ ವಿರೋಧದ ನಡುವೆಯೂ ಪಾಲಿಕೆ (Tumkur Muncipality) ಹಾಗೂ ಎಪಿಎಂಸಿ (APMC) ಮಾಲ್ ತೆರೆಯಲು ಮುಂದಾಗಿವೆ.

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇರುವ ಜಾಗದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಮಾಲ್ ನಿರ್ಮಾಣಕ್ಕೆ ಪಾಲಿಕೆ ಪ್ಲಾನ್ ಮಾಡಿಕೊಂಡಿದೆ. ನಗರದ ಹೃದಯಭಾಗದಲ್ಲೇ ಈ ಜಮೀನು ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಡೆಹಿಡಿಯಲಾಗಿದ್ದ ಯೋಜನೆಗೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮರುಜೀವ ಬಂದಿದೆ.

ಎರಡು ವರ್ಷದ ಹಿಂದೆ ಈ ಯೋಜನೆಯ ಅನುಷ್ಟಾನಕ್ಕೆ ಪಾಲಿಕೆ ಮತ್ತು ಎಪಿಎಂಸಿ ಮುಂದಾಗಿದ್ದವು. ಯೋಜನೆ ಅನುಷ್ಟಾನಕ್ಕಾಗಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ನೆಲಸಮ ಮಾಡಲು ಮುಂದಾದಾಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು‌. ಇದೀಗ ಈ ಯೋಜನೆಗೆ ಮರುಜೀವ ನೀಡಲಾಗಿದೆ.

40ಕ್ಕೂ ಹೆಚ್ಚು ವರ್ಷಗಳಿಂದ ಈ ಜಮೀನಿನಲ್ಲಿ ದೇವಸ್ಥಾನವಿದೆ. ಇದರಲ್ಲಿ ಸುಮಾರು 1 ಎಕರೆ 30 ಗುಂಟೆ ಜಾಗವನ್ನು ಮುಸ್ಲಿಂ ಗುತ್ತಿಗೆದಾರರಿಗೆ ನೀಡಲು ಮಹಾನಗರಪಾಲಿಕೆ ಪ್ಲಾನ್ ರೂಪಿಸಿದೆ. ಪಾಲಿಕೆ ನಿರ್ಧಾರಕ್ಕೆ ಶಾಸಕರು, ರಾಜಕೀಯ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಡಿಸಿದ್ದು, ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದು, ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಮಾಲ್‌ ಕಾಮಗಾರಿ ಭೂಮಿಪೂಜೆಗೂ ಡೇಟ್ ಫಿಕ್ಸ್ ಆಗಿದೆ. ಆದರೆ ಈ ಕೂಡಲೇ ಯೋಜನೆಯನ್ನು ಕೈಬಿಡುವಂತೆ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿವೆ.

ಮಳೆ, ಪ್ರವಾಹಕ್ಕೆ ಬೆಳಗಾವಿ ತತ್ತರ, ಸಪ್ತನದಿಗಳಲ್ಲಿ ಪ್ರವಾಹ

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ (belagavi news) ಹಾಗೂ ಚಿಕ್ಕೋಡಿ (Chikkodi news) ಅವಳಿ ಜಿಲ್ಲೆಗಳ ಜನತೆ ಮಳೆ (Rain in Karnataka) ಹಾಗೂ ನದಿಗಳ ಅಬ್ಬರದಿಂದ ತತ್ತರಿಸಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು (Flood situation), ಘಟಪ್ರಭಾ ನದಿಯ (Ghataprabha River) ನೀರು ಮನೆಬಾಗಿಲವರೆಗೂ ಬಂದಿರುವುದರಿಂದ ಜನತೆ ಮನೆ ತೊರೆದು ಕಾಳಜಿ ಕೇಂದ್ರಗಳ ಕಡೆ ಸಾಗಿದ್ದಾರೆ.

ಘಟಪ್ರಭಾ ನದಿಯ ನೀರು ಉಕ್ಕಿ ಬಂದು ಮನೆಯ ಬಾಗಿಲವರೆಗೂ ತಲುಪಿರುವುದರಿಂದ, ಹೆಚ್ಚಿನ ಅನಾಹುತ ಆಗದಿರಲೆಂದು ಜನ ಮನೆ ಖಾಲಿ ಮಾಡುತ್ತಿದ್ದಾರೆ. ಗೋಕಾಕದ ದನದ ಪೇಟೆಗೆ ನದಿ ನೀರು ನುಗ್ಗುತ್ತಿದೆ. ನೀರು ಹೆಚ್ಚಾಗುತ್ತಿರುವುದರಿಂದ ಜನ ಕಂಗಾಲಾಗಿದ್ದು, ಈಗಾಗಲೇ ಕೆಲವು ಶೆಡ್‌ಗಳು ನೀರಲ್ಲಿ ಮುಳುಗಿವೆ. ದನದ ಪೇಟೆ ಪಟಗುಂದಿ ಹನುಮ ಗುಡಿಗೂ ಜಲಕಂಟಕ ಎದುರಾಗಿದೆ. ಸದ್ಯ ನೀರಿನಲ್ಲಿಯೇ ಜನ ನಿತ್ಯ ಕೆಲಸಗಳಿಗಾಗಿ ಓಡಾಡುತ್ತಿದ್ದು, ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ನದಿ ಒಳಹರಿವು 55 ಸಾವಿರ ಕ್ಯೂಸೆಕ್ ದಾಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಗೋಕಾಕ್ ತಾಲೂಕಿನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ, ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತವಾಗಿವೆ. ಇದರಿಂದ ಜಿಲ್ಲೆಯ ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 87 ಗ್ರಾಮಗಳಿಗೆ, ಬೆಳಗಾವಿ ವ್ಯಾಪ್ತಿಯಲ್ಲಿ 35 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 122 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 45 ಬೋಟ್‌ಗಳು ಸಿದ್ಧತೆಯಲ್ಲಿವೆ. ಈಗಾಗಲೇ ಒಂದು ಎನ್‌ಡಿಆರ್‌ಎಫ್ ತಂಡ ಬೀಡುಬಿಟ್ಟಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ದೂಧಗಂಗಾ ನದಿ ಅಬ್ಬರಿಸಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ ನದಿ ನೀರು ಗ್ರಾಮದ ಕುರುಬರ ಗಲ್ಲಿಗೆ ನುಗ್ಗಿದೆ. ಹೀಗಾಗಿ ಜನ ಊರು ಖಾಲಿ ಮಾಡುತ್ತಿದ್ದು, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ನಿನ್ನೆ ರಾತ್ರಿಯೆಲ್ಲ‌ ನಿದ್ದೆಯಿಲ್ಲದೆ ಕಂಗೆಟ್ಟ ಗಡಿ ಜಿಲ್ಲೆಯ ಜನ, ಇಂದು ಹುಣ್ಣರಗಿ ಗ್ರಾಮದಿಂದ ಸುರಕ್ಷಿತ ಸ್ಥಳಗಳತ್ತ, ಊರ ಹೊರಗಿನ ಶಾಲೆಯತ್ತ ಸಾಗುತ್ತಿದ್ದಾರೆ.

ಗೋಕಾಕ: ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಅಬ್ಬರಕ್ಕೆ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆಯಲ್ಲಿ ಮೂಡಿರುವ ಬಿರುಕಿನಿಂದಾಗಿ ಜನ ಆತಂಕದಲ್ಲಿದ್ದಾರೆ. ಈ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು, ಜನ ಓಡಾಡುತ್ತಾರೆ. ಇನ್ನೊಂದು ಕಡೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದನ್ನೂ ಓದಿ: Karnataka Rain News: ಮುಂದುವರಿದ ಮಳೆ ಅವಾಂತರ; ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವು

Exit mobile version