ತುಮಕೂರು: ಮದ್ಯದ ನಶೆಯಲ್ಲಿ ಅರೆನಗ್ನನಾಗಿ ಬಂದ ಯುವಕನೊಬ್ಬ ತಾಲೂಕು ಕಚೇರಿಯಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದ. ಕುಡಿತದ ಮತ್ತಿನಲ್ಲಿದ್ದ ಯುವಕ ಸಾರ್ವಜನಿಕರ ಎದುರೇ ಬಟ್ಟೆ ಬಿಚ್ಚಿ ಪೊಲೀಸರಿಗೆ ತೊಡೆ ತಟ್ಟಿ ಆವಾಜ್ ಹಾಕಿದ್ದಾನೆ. ತುರುವೆಕೆರೆ ತಾಲೂಕು ಕಚೇರಿಯಲ್ಲಿ (Tumkur News) ಕುಡುಕನ ಹುಚ್ಚಾಟಕ್ಕೆ ಪೊಲೀಸರೇ ಹೈರಾಣಾದರು.
ತುರುವೆಕೆರೆ ಪಟ್ಟಣದ ವಿನೋಭಾ ನಗರ ನಿವಾಸಿ ರವಿ ಎಂಬಾತ ರಂಪಾಟ ನಡೆಸಿದವನು. ಕೌಟುಂಬಿಕ ಸಮಸ್ಯೆಗೆ ಮನನೊಂದ ರವಿ ಕಂಠಪೂರ್ತಿ ಕುಡಿದು ಬಂದಿದ್ದ. ಈ ವೇಳೆ ಬಟ್ಟೆ ಹರಿದುಹಾಕಿಕೊಂಡು ಪೊಲೀಸರ ಮುಂದೆಯೇ ಪತ್ನಿ ಹಾಗೂ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: Assault Case : ದಾರಿ ಬಿಡು ಎಂದಿದ್ದಕ್ಕೆ ಬಸ್‌ಗೆ ಕಲ್ಲೆಸೆದ ಕುಡುಕ; ಕಾರ್ ಪಾರ್ಕಿಂಗ್ ವಿಷ್ಯಕ್ಕೆ ಹೊಡಿಬಡಿ
ಮೊದಮೊದಲು ಅಲ್ಲಿದ್ದ ಸಾರ್ವಜನಿಕರು ರವಿಯನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೆ ರವಿ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಸಿಕ್ಕ ಸಿಕ್ಕವರಿಗೆ ಬೈಯುತ್ತಾ, ಪತ್ನಿ ಹಾಗೂ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಎಷ್ಟೇ ತಿಳಿ ಹೇಳಿದರೂ ಕೇಳದೇ ಇದ್ದಾಗ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ರವಿಯನ್ನೂ ತಾಲೂಕು ಕಚೇರಿಯಿಂದ ಹೊರಕಳಿಸಲು ಮುಂದಾಗಿದ್ದಾರೆ. ಆದರೆ ಆತ ಹೊರ ಹೋಗದೇ ಮತ್ತಷ್ಟು ಸಿಟ್ಟಾಗಿದ್ದಾನೆ. ತಾನು ಧರಿಸಿದ್ದ ಪ್ಯಾಂಟ್, ಶರ್ಟ್ ಬಿಚ್ಚಿ, ಹೊಡೆಯಲು ಬಂದ ಪೊಲೀಸರಿಗೆ ತೊಡೆ ತಟ್ಟಿ ಅವಾಜ್ ಹಾಕಿದ್ದಾನೆ. ರವಿಯ ರಂಪಾಟಕ್ಕೆ ಬೇಸತ್ತ ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ. ರವಿಯ ಈ ಹುಚ್ಚಾಟಕ್ಕೆ ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ಪರಿಸ್ಥತಿಯನ್ನು ತಿಳಿಗೊಳಿಸಿದರು. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ