ಕೊರಟಗೆರೆ: ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ (Tumkur News) ನೆರೆವೇರಿತು.
ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಇದನ್ನೂ ಓದಿ:Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ
ಸಾಹಿತಿ ಡಾ. ನರಸಿಂಹಮೂರ್ತಿ ಮಾತನಾಡಿ, ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಳಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ-ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ. ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು, ಜಲಧಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜ ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ ಗ್ರಾಮ ಶಕ್ತಿ ಬೇವಿನಳಮ್ಮ ತಾಯಿಯು ಗ್ರಾಮಕ್ಕೆ ಯಾವುದೇ ತೊಂದರೆ ತೊಡಕುಗಳು ಆಗದಂತೆ ಕಾಪಾಡಿಕೊಂಡು ಬರುತ್ತಿದ್ದಾಳೆ. ಬರಗಾಲವಿರುವುದರಿಂದ ಅದ್ದೂರಿಯಾಗಿ ಜಾತ್ರೆ ಮಾಡಲು ಆಗದ ಕಾರಣ ಜಲಧಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೂಜಾರು ಲಕ್ಷ್ಮೀಶ್, ಗ್ರಾಮಸ್ಥರಾದ ತಿಮ್ಮರಾಜು, ಮಧುಸೂಧನ್, ಟೈಗರ್ ನಾಗರಾಜು, ಬಸವರಾಜು, ಕೇಬಲ್ ಸಿದ್ದಗಂಗಯ್ಯ, ಮಂಜುನಾಥ್, ಹನುಮಂತರಾಜು, ಚಂದ್ರಕುಮಾರ್, ಸಿದ್ದರಾಜು, ದೇವರಾಜು, ನಾಗರಾಜು, ಕೆಂಪರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.