ತುಮಕೂರು: ಇಲ್ಲಿನ ಶಿರಾ ಬಳಿ ಮುಂಜಾನೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ೧೦ ಜನರಲ್ಲಿ ಆರು ಮಂದಿಯ ನೇತ್ರದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಸಾವಿನ ಮನೆಯಲ್ಲಿಯೂ ಕುಟುಂಬದವರು ಸಾರ್ಥಕತೆ (Tumkur Accident) ಮೆರೆದಿದ್ದಾರೆ. ಮೂರು ವರ್ಷದ ಮಗುವಿನ ಕಣ್ಣನ್ನೂ ದಾನ ಮಾಡಿರುವುದು ವಿಶೇಷವಾಗಿದೆ.
ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕಣ್ಣು ದಾನ ಮಾಡಿದ ಬಗ್ಗೆ ಶಿರಾ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶ್ರೀನಾಥ್ ಕೆ.ಆರ್. ಮಾಹಿತಿ ನೀಡಿದ್ದಾರೆ.
ಮೂರು ವರ್ಷದ ಮಗುವಿನ ಕಣ್ಣು ದಾನ
ಮೃತಪಟ್ಟಿರುವ ಮೂರು ವರ್ಷದ ಮಗು ವಿನೋದ್‌ನ ಕಣ್ಣು ದಾನ ಮಾಡಲಾಗಿದೆ. ಅಲ್ಲದೆ, ಸುಜಾತ, ಮೀನಾಕ್ಷಿ, ಕೃಷ್ಣಪ್ಪ, ಪ್ರಭು, ಸಿದ್ದಾರ್ಥ ಎಂಬುವವರ ಕಣ್ಣುಗಳನ್ನು ಸಹ ಕುಟುಂಬಸ್ಥರ ಅನುಮತಿ ಮೇರೆಗೆ ದಾನವಾಗಿ ಪಡೆಯಲಾಗಿದೆ.
ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಶಿರಾ ಬಳಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು (ಹೆಸರು ತಿಳಿದುಬಂದಿಲ್ಲ) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕ್ರೂಸರ್‌ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕ್ರೂಸರ್‌ನಲ್ಲಿ ಸುಮಾರು 23 ಜನರನ್ನು ತುಂಬಿಕೊಂಡು ಬರಲಾಗುತ್ತಿತ್ತು, ಬೆಳಗ್ಗಿನ ಜಾವ 4.30ರ ಸಮಯದಲ್ಲಿ ಲಾರಿ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿತ್ತು.
ಲಾರಿಯನ್ನು ಓವರ್‌ಟೇಕ್ ಮಾಡುವ ವೇಳೆ ಡಿವೈಡರ್ ಮೇಲೆ ಚಕ್ರ ಹತ್ತಿದ್ದು, ಟಯರ್ ಬ್ಲಾಸ್ಟ್ ಆಗಿದೆ. ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಚಾಲಕ ಸೇರಿ 9 ಜನ ಮೃತಪಟ್ಟಿದ್ದರು. ಅದರಲ್ಲಿ ಇಬ್ಬರು ಮಕ್ಕಳು, 14 ಜನರಿಗೆ ಗಾಯಗಳಾಗಿವೆ. ಇಬ್ಬರು ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಇದನ್ನೂ ಓದಿ | Tumkur accident | ಕಂಬನಿ ಮಿಡಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ