ತುಮಕೂರು: ಇದು ತುಮಕೂರಿನಲ್ಲಿ ನಡೆದ ಪ್ರಾಣಿಪ್ರೀತಿಯ ವಿಶಿಷ್ಟ ಘಟನೆ. ಒಮ್ಮೆ ಸಾಕುಪ್ರಾಣಿ- ಪಕ್ಷಿಗಳನ್ನು ಹಚ್ಚಿಕೊಂಡರೆ ಅವು ಜೀವಕ್ಕಿಂತಲೂ ಮಿಗಿಲಾಗಿಬಿಡುತ್ತವೆ ಎಂಬುದಕ್ಕೆ ಇದು ನಿದರ್ಶನ.
ಈ ನಿಜಘಟನೆಯ ಕೇಂದ್ರದಲ್ಲಿ ಇರುವವರು ಎರಡು ಗಿಣಿಗಳು ಹಾಗೂ ಅವುಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿದ ತುಮಕೂರಿನ ಅರ್ಜುನ್- ರಂಜನಾ ದಂಪತಿ. ಇವರು ಆಫ್ರಿಕಾದಿಂದ ಪ್ರತಿ ಗಿಣಿಗೆ 20 ಸಾವಿರ ರೂ.ಗಳಂತೆ ನೀಡಿ ವಿಶಿಷ್ಟ ಜಾತಿಯ ಎರಡು ಗಿಣಿಗಳನ್ನು ಖರೀದಿಸಿ ತಂದಿದ್ದರು. ರುಸ್ತುಮಾ ಮತ್ತು ರಿಯಾ ಎಂದು ಹೆಸರಿಟ್ಟಿದ್ದರು.
15 ದಿನಗಳ ಹಿಂದೆ ರುಸ್ತುಮಾ ಹೆಸರಿನ ಗಿಣಿ ಕಳೆದು ಹೋಗಿತ್ತು. ಎಲ್ಲೆಡೆ ಹುಡುಕಿಯೂ ಸಿಗದೆ ಹೋದಾಗ, ಗಿಣಿಯನ್ನು ಹುಡುಕಿ ಕೊಟ್ಟವರಿಗೆ 85 ಸಾವಿರ ರೂ. ಬಹುಮಾನ ನೀಡುವುದಾಗಿ ಜಾಹಿರಾತು ನೀಡಿದ್ದರು. ಗಿಣಿಯ ಚಿತ್ರವಿದ್ದ ಪೋಸ್ಟರ್‌ಗಳನ್ನು ಮಾಡಿ ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂಚಿದ್ದರು. ಕಡೆಗೂ ಒಂದು ವಾರದ ಬಳಿಕ ಗಿಣಿ ಪತ್ತೆಯಾಗಿತ್ತು. ಗಿಣಿ ಹುಡುಕಿಕೊಟ್ಟವರಿಗೆ 80 ಸಾವಿರ ಬಹುಮಾನ ನೀಡಿದ್ದ ವಚನ ಪಾಲಿಸಿದ್ದರು ಗಿಣಿ ಮಾಲೀಕ ಅರ್ಜುನ್.
ಇದನ್ನೂ ಓದಿ: ಪ್ರಾಣಿ ದಯಾ ಮಾರ್ಗಸೂಚಿ ಪಾಲನೆಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಅರ್ಜಿ: ಸರಕಾರಕ್ಕೆ ನೋಟಿಸ್
ಇದಾದ ಬಳಿಕ ಅರ್ಜುನ್- ರಂಜನಾ ಬಲು ಬೇಸರದಿಂದಲೇ ಒಂದು ನಿರ್ಧಾರ ಮಾಡಿದರು. ಅದು, ಗಿಣಿಯನ್ನು ದೂರದ ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಮೃಗಾಲಯಕ್ಕೆ ಹಸ್ತಾಂತರ ಮಾಡುವುದು. ಗಿಣಿಯನ್ನು ಹುಡುಕಿಕೊಟ್ಟವರೂ ಹುಬ್ಬೇರುವಂತೆ ಮಾಡಿತ್ತು ಇವರ ಈ ನಿರ್ಧಾರ. ಅದಕ್ಕೆ ಕಾರಣ ಇಷ್ಟೇ- ಈ ಗಿಣಿಗಳಿಗೆ ಸ್ವತಃ ತಮ್ಮ ಆಹಾರ ತಾವೇ ಗಳಿಸಿಕೊಂಡು ಬದುಕಲು ಬರುವುದಿಲ್ಲ. ಇನ್ನೊಮ್ಮೆ ತಪ್ಪಿಸಿಕೊಂಡರೆ ಹದ್ದು ಮತ್ತಿತರ ಬೇಟೆ ಪಕ್ಷಿಗಳ ನಡುವೆ ಬದುಕಿ ಉಳಿದೀತೆಂಬ ಭರವಸೆಯಿಲ್ಲ. ಹೀಗಾಗಿ ಮೃಗಾಲಯಕ್ಕೆ ದಾನ ಮಾಡುವ ನಿರ್ಧಾರವಂತೆ.
ಸದ್ಯ ಗುಜರಾತಿನ ಮೃಗಾಲಯಕ್ಕೆ ಎರಡು ಗಿಣಿಗಳನ್ನೂ ಹಸ್ತಾಂತರ ಮಾಡಲಾಗಿದೆ. ಗಿಣಿಗಳು ಮೃಗಾಲಯಕ್ಕೆ ಹೋದ ಬಳಿಕ ಕುಟುಂಬ ಬೇಸರದಲ್ಲಿ ಇದೆ. ಗಿಣಿಗಳ ನೆನಪಿಗಾಗಿ ಅವುಗಳ ಪುಕ್ಕಗಳನ್ನು ಬಳಸಿ ಅರ್ಜುನ್ ಪತ್ನಿ ರಂಜನಾ ಅವರು ಕಿವಿಗೆ ಓಲೆ ಮಾಡಿಸಿಕೊಂಡಿದ್ದಾರೆ!
ಇದನ್ನೂ ಓದಿ: ಕೊಚ್ಚಿಯಿಂದ ಲಡಾಕ್‌ವರೆಗೆ ಬೈಕ್ ರೈಡ್! ಇದು ಚಾರ್ಲಿಯಲ್ಲ, ಸ್ನೋಬೆಲ್ ಕತೆ