ತುಮಕೂರು: ದೇವರಿಗೆ ಮೈಲಿಗೆ ಆಗುತ್ತೆ, ಸೂತಕವು ಆಗಿ ಬರುವುದಿಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಮೌಡ್ಯ ಆಚರಣೆಯಿಂದಾಗಿ ಮಗುವೊಂದು ತುಮಕೂರಲ್ಲಿ (Tumkur News) ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಕಳೆದ ಕೆಲವು ದಿನಗಳಿಂದ ಮಗು ಬಾಣಂತಿಯನ್ನು ಊರಿಂದಾಚೆಗೆ ಇಡಲಾಗಿದೆ. ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನು ಇರಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶೆ (Gubbi Court Judge) ಉಂಡಿ ಮಂಜುಳ ಶಿವಪ್ಪ ಗ್ರಾಮಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ. ಮಗುವನ್ನು ತಾವೇ ಕೈಗೆತ್ತಿಕೊಂಡು ಮನೆಗೆ ಕರೆತಂದಿದ್ದಾರೆ. ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ಮನೆಗೆ ಬಿಟ್ಟು ಬಿದ್ದಿದ್ದಾರೆ.
ಮತ್ತೆ ಮರುಕಳಿಸಿದರೆ ಕಾನೂನು ಕ್ರಮದ ಎಚ್ಚರಿಕೆ
ಮಗು-ಬಾಣಂತಿಯನ್ನು ಮನೆಗೆ ಬಿಟ್ಟು ಬಂದ ಬಳಿಕ ಕುಟುಂಬಸ್ಥರಿಗೆ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪನವರು ವಾರ್ನಿಂಗ್ ನೀಡಿದ್ದಾರೆ. ಈ ರೀತಿಯ ಘಟನೆ ಮತ್ತೆ ಏನಾದರೂ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ. ಸದ್ಯ ಮನೆಯೊಳಗೆ ಮಗು ಮತ್ತು ಬಾಣಂತಿ ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ: Rakhi Sawant: ಮಗುವನ್ನು ಹೆರಲು ನಾನು ಸಮರ್ಥಳು ಎಂದ ರಾಖಿ ಸಾವಂತ್!
ವಿಪರೀತ ಶೀತದಿಂದ ಮೃತಪಟ್ಟಿದ್ದ ಮಗು
ತುಮಕೂರು (Tumkur News) ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಕಳೆದ ಜುಲೈ 26ರಂದು ಸೂತಕದ ಸಂಪ್ರದಾಯಕ್ಕೆ ಮಗುವೊಂದು ಮೃತಪಟ್ಟಿತ್ತು. ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ (cold weather) ಬಳಲಿ ಮೃತಪಟ್ಟಿತ್ತು.
ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿತ್ತು. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಆದರೆ ಮೌಡ್ಯತೆಯೇ ಮಗುವಿನ ಜೀವ ತೆಗೆದಿತ್ತು.
ದೇವರ ಹೆಸರಲ್ಲಿ ಮೌಢ್ಯ
ಮನುಷ್ಯ ಎಷ್ಟೇ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ, ಚಂದ್ರನ ಮೇಲೆ ರಾಕೆಟ್ ಹಾರಿದರೂ ಕೆಲವು ಕಡೆಗಳಲ್ಲಿ ಮೌಡ್ಯಾಚರಣೆಗಳು ಮಾತ್ರ ಇಂದಿಗೂ ರೂಢಿಯಲ್ಲಿವೆ. ದೇವರು, ಸಂಪ್ರದಾಯದ ಹೆಸರಿನಲ್ಲಿ ಮನುಷ್ಯರನ್ನೇ ಕೀಳಾಗಿ ಕಾಣುವ ಪರಿಪಾಠ ಇನ್ನೂ ಕೆಲವು ಸಮುದಾಯಗಳಲ್ಲಿ ಹಾಗೆಯೇ ಇದೆ. ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲರಲ್ಲಿ ಇಂದಿಗೂ ಕೂಡ ಸೂತಕದ ಸಂಪ್ರದಾಯ ಆಚರಣೆಯಲ್ಲಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ ಮತ್ತು ಹಸುಗೂಸನ್ನೇ ಊರಿನಿಂದ ಹೊರಗಿಡುತ್ತಾರೆ. ಎರಡು ತಿಂಗಳು ಊರ ಹೊರಗೆ ನಿರ್ಮಿಸಿರುವ ಚಿಕ್ಕ ಗುಡಿಸಲಿನಲ್ಲಿಯೇ ಇರಬೇಕು.
ಊರಿಗೆ ಕೇಡು ಬರುವ ಭೀತಿ
ನಮ್ಮ ದೇವರಿಗೆ ಸೂತಕ ಆಗಲ್ಲ. ಹಾಗಾಗಿ ನಾವು ಬಾಣಂತಿಯನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು ಆಗುತ್ತದೆ ಎಂಬುದು ಈ ಊರಿನವರ ನಂಬಿಕೆ. ಕಾಡುಗೊಲ್ಲರ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ. ಹಿಂದಿನಿಂದಲ್ಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಳೆ, ಗಾಳಿ ಏನೇ ಬರಲಿ, ಅವರು ಇದ್ದರೂ, ಸತ್ತರೂ ಊರಿಂದ ಆಚೆಯೇ ಇರಬೇಕು. ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಊರಿನವರ ಉತ್ತರವಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ