ವಿಜಯನಗರ/ಮುನಿರಾಬಾದ್: ತುಂಗಭದ್ರಾ ಡ್ಯಾಮ್‌ನ ಕ್ರಸ್ಟ್ ಗೇಟ್‌ನ ಚೈನ್ ಕತ್ತರಿಸಿ ನೀರು ಹರಿದು ಪೋಲಾಗಿರುವುದರಿಂದ ರಾಜ್ಯ ಸರ್ಕಾರವು ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಚಾಲನೆ ಕೊಡಲು ಇದು ಸೂಕ್ತ ಸಮಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ಇಂದು ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: KSET Updates: ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಆ.17ಕ್ಕೆ ದಾಖಲೆ ಪರಿಶೀಲನೆ
ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಚಾಲನೆ ಕೊಡಲು ಇದು ಒಳ್ಳೆಯ ಕಾರಣ ಮತ್ತು ಸಮಯ. ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಅದನ್ನು ಆಂಧ್ರಪ್ರದೇಶ ಸರ್ಕಾರದ ಜತೆಗೆ ಹಂಚಿಕೊಂಡಿದ್ದೇವೆ. ಹಿಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಆರ್. ಜಗನಮೋಹನ್ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದೇವು. ಅವರು ತಾಂತ್ರಿಕ ತಂಡ ಕಳುಹಿಸಿಕೊಟ್ಟಿದ್ದರು. ತಾಂತ್ರಿಕವಾಗಿ ಒಪ್ಪಿಗೆಯೂ ಆಗಿತ್ತು. ರಾಜಕೀಯ ತೀರ್ಮಾನ ಮಾಡುವುದು ಬಾಕಿ ಉಳಿದಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಈಗಿನ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ 28 ಟಿಎಂಸಿ ನೀರು ಉಳಿತಾಯವಾಗಲಿದೆ ಎಂದು ಹೇಳಿದರು.
ತುಂಗಭದ್ರಾ ಕಲ್ಯಾಣ ಕರ್ನಾಟಕದ ಜೀವನಾಡಿ, ನಮ್ಮ ಕರ್ನಾಟಕದ ಒಟ್ಟು ಕೃಷಿ ಆದಾಯದಲ್ಲಿ ಶೇ. 40% ಕ್ಕಿಂತ ಹೆಚ್ಚು ಆದಾಯ ತುಂಗಭದ್ರಾ ಡ್ಯಾಮ್ ಪ್ರದೇಶದಿಂದ ಬರುತ್ತದೆ. ಮೂರು ರಾಜ್ಯಗಳು ಇದರ ಪಾಲು ಪಡೆಯುತ್ತವೆ. ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ತುಂಗಭದ್ರಾ ಡ್ಯಾಮ್‌ನಲ್ಲಿ ಹೂಳು ತುಂಬಿರುವುದರಿಂದ ಸಂಕಷ್ಟ ಬಂದಿದೆ. ಇದರಿಂದ ಸುಮಾರು ಮೂವತ್ತು ಟಿಎಂಸಿ ನೀರಿನಷ್ಟು ಹೂಳು ತುಂಬಿದೆ. ಇವತ್ತಿನ ಘಟನೆ ಮುಂದಿನ ಘಟನೆಗಳಿಗೆ ಆತಂಕ ಹುಟ್ಟಿಸುವ ಘಟನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಗೇಟನ್ನು ಪ್ಯಾಬ್ರಿಕೆಟ್ ಮಾಡುತ್ತೇವೆ ಅಂತ ಹೇಳುತ್ತಾರೆ. ಅಷ್ಡೇ ಅಲ್ಲ. ನೀರು ಶಕ್ತಿ ಮೀರಿ ಬರುತ್ತದೆ. ಓವರ್ ಲೋಡ್ ಅನಾಹುತಕ್ಕೆ ಕಾರಣವಾಗಿದೆ.
ಇದರಲ್ಲಿ ಎರಡು ಸಮಸ್ಯೆ ಇದೆ. ಮುಂಗಾರು ಪೂರ್ವ ನಿರ್ವಹಣೆ ಸಮಸ್ಯೆಯಾಗಿದೆ. ಇದು ವರ್ಟಿಕಲ್ ಗೇಟ್, ಈ ಗೇಟನ್ನು ಆಪರೇಟ್ ಮಾಡುವಾಗ ಆಗುವ ಲೀಕೇಜ್ ಎಲಿಮೆಂಟ್ ಬಹಳ ಮುಖ್ಯ. ಒಂದು ಬೇರಿಂಗ್ ಹೋದರೂ ಕೂಡ ಗೇಟ್ ಕಿತ್ತು ಹೋಗುತ್ತದೆ. ಎಲ್ಲಿ ಗೇಟಿಗೆ ಸಂಪರ್ಕ ಕಲ್ಪಿಸಬೇಕಿತ್ತೊ ಅದೇ ಲಿಂಕ್ ಕಿತ್ತು ಹೋಗಿದೆ. ಇದು ನಿಷ್ಕ್ರೀಯ ಲಿಂಕ್ ಇದೆ. ಹೀಗಾಗಿ ಅದು ಕಿತ್ತು ಹೋಗಿದೆ. ಇದಕ್ಕೆ ಯಾರೂ ಕಾರಣ ಅಲ್ಲ ಅಂತ ಹೇಳುವುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಿಗಳು, ಸರ್ಕಾರವೂ ಕಾರಣ ಅಲ್ಲ ಆಂದರೆ ಹೇಗೆ? ಇಷ್ಟು ದಿನ ಆಗದಿರುವುದು ಈಗ ಏಕೆ ಆಯಿತು. ನೀರು ಎಷ್ಟು ಬಿಡಬೇಕು, ಎಷ್ಟು ಹಿಡಿದಿಟ್ಟುಕೊಳ್ಳಬೇಕೊ ಅದನ್ನು ನೋಡಿಕೊಳ್ಳಲು ನೀರು ನಿರ್ವಹಣೆ ತುಂಗಭದ್ರ ಬೊರ್ಡ್ ಇದೆ. ಅದು ಸರಿಯಾಗಿ ನೋಡಿಕೊಳ್ಳಬೇಕು. ಡ್ಯಾಮ್‌ನ ಗೇಟುಗಳನ್ನು ಹಂಚಿಕೊಂಡಿದ್ದಾರೆ. 0-16 ಆಂಧ್ರದ್ದು, ಆ ನಂತರದ್ದು ಕರ್ನಾಟಕದ್ದು, ಇಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. 19ನೇ ಗೇಟು ಕರ್ನಾಟಕದ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕದ ಎಂಜನೀಯರ್ಗಳ ಜವಾಬ್ದಾರಿ ಹೆಚ್ಚಿದೆ. ಇದನ್ನು ಎಂಜನಿಯರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಲ್ಲ ಗೇಟುಗಳನ್ನು ಪರಿಶೀಲನೆ ಮಾಡಬೇಕಿದೆ. ಈಗ ನೀರಿನ ಪ್ರಮಾಣ ಕಡಿಮೆ ಇದೆ. ನೀರು ಹೆಚ್ಚಾದಾಗ ಮತ್ತೆ ಏನು ಸಮಸ್ಯೆಯಾಗುತ್ತದೊ ಗೊತ್ತಿಲ್ಲ. ನೀರಿನ ನಿರ್ವಹಣೆಗೆ ಹೊಸ ಮಾನದಂಡ ನಿರ್ಧರಿಸಬೇಕು. ಈ ವರ್ಟಿಕಲ್ ಗೇಟ್‌ಗೆ ಬೇಕಾದ ಸಾಧನಗಳ ಬಗ್ಗೆ ಪರಿಶೀಲನೆ ಮಾಡಿ ತನಿಖೆ ಮಾಡಬೇಕು. ಆಗ ಎಲ್ಲಿ ವೈಫ್ಯಲ ಆಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಸರ್ಕಾರದವರು ಮೂರು ನಾಲ್ಕು ದಿನಗಳಲ್ಲಿ ಸರಿಪಡಿಸುವುದಾಗಿ ಹೇಳುತ್ತಾರೆ. ಅಖಂಡ ಗೇಟ್ ಇರುವಾಗ ಈ ಸಮಸ್ಯೆ ಆಗಿದೆ. ಫ್ಯಾಬ್ರಿಕೇಟ್ ಹಾಕಿದರೆ ಏನಾಗುತ್ತದೊ ಗೊತ್ತಿಲ್ಲ. ಎಚ್ಚರಿಕೆಯಿಂದ ಮಾಡುವಂತೆ ಸಲಹೆ ನೀಡಿದ್ದೇವೆ.
ಇದನ್ನೂ ಓದಿ: Karnataka Weather : ಗದ್ದೆಯಲ್ಲಿ ನಾಟಿ ಮಾಡುತ್ತಿದ್ದಾಗಲೇ ಬಡಿದ ಸಿಡಿಲು; 15 ಮಂದಿ ಆಸ್ಪತ್ರೆ ಪಾಲು
ಇನ್ನೊಂದು ಸಮಸ್ಯೆ ಇವತ್ತು ನೀರನ್ನು ಉಳಿತಾಯ ಮಾಡಬೇಕು. ನೀರು ಹರಿವು ಇಟ್ಟುಕೊಂಡೆ ಈ ಗೇಟನ್ನು ನಾವು ಫ್ಯಾಬ್ರಿಕೆಟ್ ಮಾಡಿ ಜೋಡಿಸುತ್ತೇವೆ ಎನ್ನುವುದು ಸ್ವಾಭಾವಿಕ. ಇದನ್ನು ಮಾಡುವಾಗ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಫ್ಯಾಬ್ರಿಕೆಶನ್ ಕೆಳಗಿಳಿಸಿ ಮತ್ತೆ ಜೋಡಿಸುವುದು ಬಹಳ ಮುಖ್ಯ, ಅದಕ್ಕೆ ಕ್ರೇನ್ ವ್ಯವಸ್ಥೆ ಇರಬೇಕು. ಇದಕ್ಕೆ ಲಿಫ್ಟ್ ಮಾದರಿಯಲ್ಲಿ ಕೌಂಟರ್ ವೇಟ್ ಇರಬೇಕು. ಇವೆಲ್ಲವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಇವರು ಕ್ರೇನ್ ಮೂಲಕ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕೆಆರ್‌ಎಸ್‌ನಲ್ಲಿ ಇದೇ ರೀತಿ ಸಮಸ್ಯೆಯಾದಾಗ ನಾವು 16 ಗೇಟ್‌ಗಳನ್ನು ಆಳವಡಿಸಬೇಕಾಗಿತ್ತು. ಆಗ ಗೇಟ್ ಒಡೆದಿರಲಿಲ್ಲ. ಸೋರಿಕೆಯಾಗಿತ್ತು. ಆಗ ಇದೇ ನಾರಾಯಣ ಸಂಸ್ಥೆಯವರು ಮಾಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಸವಾಲಾಗಿತ್ತು. 2005 ರಲ್ಲಿ ಖರ್ಗೆಯವರು ನೀರಾವರಿ ಸಚಿವರಾಗಿದ್ದಾಗ ನಾರಾಯಣ ಸಂಸ್ಥೆಯವರು ನಾರಾಯಣಪುರ ಡ್ಯಾಮ್ ಗೇಟ್ ಅಳವಡಿಸುತ್ತಿದ್ದರು. ಆಗ ಅವರನ್ನು ಬಳಸಿಕೊಂಡು ಗೇಟ್ ಸರಿಪಡಿಲಾಗಿತ್ತು ಎಂದು ಹೇಳಿದರು.
ತಜ್ಞರ ತಂಡ ರಚಿಸಿ
ನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಬಗ್ಗೆ ಸರಿಯಾದ ತನಿಖೆಯಾಗಬೇಕು. ಡ್ಯಾಂ ಸುರಕ್ಷತಾ ನಿರ್ವಹಣಾ ಸಮಿತಿ ನೀಡಿರುವ ಸಲಹೆಗಳನ್ನು ಸರಿಯಾಗಿ ಪಾಲಿಸಿಲ್ಲ. ಡ್ಯಾಮ್‌ಗಳ ನಿರ್ವಹಣೆಗೆ ವಿಶ್ವ ಬ್ಯಾಂಕ್ ಹಣ ಕೊಡುತ್ತದೆ. ಆ ಹಣವನ್ನು ಸಂಪೂರ್ಣ ಬಳಕೆ ಮಾಡಿ, ಎಲ್ಲ ಗೇಟ್‌ಗಳನ್ನು ಪರಿಶೀಲನೆ ಮಾಡಿ ಯಾವುದು ಬದಲಾವಣೆ ಮಾಡಬೇಕೊ ಅದನ್ನು ಬದಲಾಯಿಸಬೇಕು. ರಾಜ್ಯದ ಬಹುತೇಕ ಆಣೆಕಟ್ಟೆಗಳು ಐವತ್ತು ವರ್ಷ ಪೂರೈಸಿವೆ. ಬಹಳಷ್ಟು ಡ್ಯಾಮ್‌ಗಳಿಗೆ ಸ್ಟ್ರಾಪ್‌ಪ್ಲಗ್ ಗೇಟ್‌ಗಳು ಇಲ್ಲ. ಸ್ಟಾಪ್ ಪ್ಲಗ್ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಡ್ಯಾಮ್‌ಗಳ ಸುರಕ್ಷತೆಯ ಒಂದು ವಿಶೇಷ ತಜ್ಞರ ತಂಡ ರಚನೆ ಮಾಡಿ, ಕೇಂದ್ರದ ಮಾದರಿಯಲ್ಲಿ ಈ ತಂಡ ಡ್ಯಾಮ್‌ಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಈ ಕೆಲಸವನು ಎಲ್ಲರೂ ಸೇರಿ ಮಾಡೋಣ ಎಂದರು.
ರೈತರಿಗೆ ಪರಿಹಾರ ಕೊಡಿ
ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಘಟನೆಗೆ ಯಾರೂ ಹೊಣೆಯಲ್ಲ ಎಂದು ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಲೋಪ ಇದೆ. ಅದು ಯಾರಿಂದ ಆಗಿದೆ ಎನ್ನುವುದನ್ನು ತಿಳಿಯಲು ತನಿಖೆ ಮಾಡಬೇಕು. ಆಗ ಮಾತ್ರ ಸರ್ಕಾರದ ಮೇಲೆ ನಂಬಿಕೆ ಬರುತ್ತದೆ.
ನಮಗೆ 115 ಟಿಎಂಸಿ ನೀರು ಬೇಕು. ಈಗಾಗಲೇ 20 ಟಿಎಂಸಿ ನೀರು ಹರಿದು ಹೋಗಿದೆ. ಇನ್ನೂ ಮಳೆಯಿಂದ ಸುಮಾರು 40 ಟಿಎಂಸಿ ನೀರು ಬರುವ ನಿರೀಕ್ಷೆ ಇದೆ. ಆದರೆ ಅದು ಪ್ರಕೃತಿ ಮೇಲೆ ನಿರ್ಧಾರ ಆಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಎರಡನೇ ಬೆಳೆ ಬೆಳೆಯುವುದು ಕಷ್ಟವಾಗಲಿದ್ದು, ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರವಾಹ ಬಂದಾಗ ನಾವು ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 13500 ರೂ. ನೀಡಿದ್ದೇವು. ಈಗ ರಾಜ್ಯ ಸರ್ಕಾರ ನಷ್ಟವನ್ನು ಪರಿಶೀಲಿಸಿ ಪತಿ ಹೆಕ್ಟೇರ್‌ಗೆ 50 ಸಾವಿರ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್; ಇಲ್ಲಿದೆ ಪೂರ್ಣ ಪಟ್ಟಿ
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಜರಿದ್ದರು.