Site icon Vistara News

Tungabhadra Dam: ಬರಿದಾದಳೇ ತುಂಗಭದ್ರೆ? 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 5 ಟಿಎಂಸಿ ನೀರೂ ಇಲ್ಲ!

Tungabhadra Dam

ವಿಜಯನಗರ: ಈ ಬಾರಿ ಹಿಂಗಾರು ಮಳೆ ಅಬ್ಬರಿಸುತ್ತಿದ್ದು, ರಾಜ್ಯದೆಲ್ಲೆಡೆ ವರುಣನಾರ್ಭಟ ಜೋರಾಗಿದೆ. ಕೆಲವು ಕಡೆ ಅವಾಂತರವನ್ನೇ ಸೃಷ್ಟಿಸಿದೆ, ಇನ್ನೂ ಸೃಷ್ಟಿಸುತ್ತಿದೆ. ಆದರೆ, ಈ ಮಧ್ಯೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯವು ಬಹುತೇಕ ಖಾಲಿಯಾಗಿದೆ. ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ ತಲುಪಿದ್ದು, ರೈತರು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ವಿವಿಧ ಕಡೆ ಕಳೆದ ಒಂದು ತಿಂಗಳಿನಿಂದ ಮಳೆ ಆಗುತ್ತಿದ್ದರೂ, ಈ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುರಿಯದೇ ಇರುವುದೇ ನೀರಿನ ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗಿದೆ.

ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಕೆಲವು ಜಿಲ್ಲೆಗಳಿಗೆ ಈ ಜಲಾಶಯದ ನೀರು ಅತ್ಯವಶ್ಯಕವಾಗಿದೆ. ತುಂಗಭದ್ರಾ ಜಲಾಶಯವು 105 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷ ಈ ವೇಳೆಗೆ 35ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ಬಾರಿ 5 ಟಿಎಂಸಿ ಸಂಗ್ರಹ ಕೂಡಾ ಜಲಾಶಯದಲ್ಲಿ ಇಲ್ಲ.

ಬರಿದಾಗಿರುವ ತುಂಗಭದ್ರಾ ಜಲಾಶಯದ ಒಂದು ನೋಟ

ರೈತರಿಗೆ ಎದುರಾಗಲಿದೆಯೇ ಸಂಕಷ್ಟ?

ಜಲಾಶಯದಲ್ಲಿ ನೀರು ಸಂಗ್ರಹವಿಲ್ಲದ ಕಾರಣ ಈ ಬಾರಿ ರೈತರಿಗೆ ಸಂಕಷ್ಟ ಎದುರಾಗಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಈಗ ಮುಂಗಾರು ಪ್ರವೇಶ ಆಗುವ ಸಮಯ. ಆದರೆ, ಮಳೆ ಯಾವ ರೀತಿ ಆಗಲಿದೆ ಎಂಬುದನ್ನು ಈಗಲೇ ಊಹಿಸಲು ಆಗುವುದಿಲ್ಲ. ಇದರಿಂದ ಒಂದು ವೇಳೆ ಮಳೆ ಕಡಿಮೆಯಾಗಿ, ಇನ್ನೂ ಸ್ವಲ್ಪ ದಿನ ವಿಳಂಬವಾದರೆ ಕಥೆ ಏನು? ಎಂಬ ಭಯದಲ್ಲಿ ರೈತರು ಇದ್ದಾರೆ.

101 ಟಿಎಂಸಿ ಶೇಖರಣಾ ಸಾಮರ್ಥ್ಯವಿರುವ ತುಂಗಾ ಭದ್ರಾ ಜಲಾಶಯವು 28000 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಟಿಬಿ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದ್ದು ಮತ್ತು ಸುಮಾರು 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದೆ. ಅಲ್ಲದೆ, ಇದರ ಮೂಲಕ ಸುಮಾರು 10 ಲಕ್ಷ ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ಡೆಡ್ ಸ್ಟೋರೇಜ್‌ನತ್ತ ಕೆಆರ್‌ಎಸ್ ಡ್ಯಾಂ

ಕರುನಾಡಿನ ಜೀವ ನದಿ ಕಾವೇರಿಯಲ್ಲಿಯೂ (Cauvery) ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪರಿಣಾಮ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಕಳೆದ ಐದು ವರ್ಷದಲ್ಲೇ ಕಡಿಮೆ ಮಟ್ಟಕ್ಕೆ (Water Level) ನೀರಿನ ಸಂಗ್ರಹವಿದೆ. ಈಗ ಎರಡು ವಾರದ ಹಿಂದೆ ಕೆಆರ್‌ಎಸ್‌ ಈಗ 81 ಅಡಿಗೆ ತಲುಪಿತ್ತು. ಪರಿಸ್ಥಿತಿ ಹೀಗೇ ಮುಂದುವರಿದರೆ ಡೆಡ್ ಸ್ಟೋರೇಜ್ ತಲುಪಿ, ಕುಡಿಯುವ ನೀರಿಗೂ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಲೂ ಸಹ ಅಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣವೂ ಎಂದಿಗಿಂತ ಹೆಚ್ಚೇ ಇರುವುದು ಸಹ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕಾವೇರಿ ಕೊಳ್ಳದ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಇದು ಈಗ ಭಾರಿ ತಲೆನೋವಿಗೆ ಕಾರಣವಾಗಿದೆ. ಏಕೆಂದರೆ, ಹಲವೆಡೆ ಬತ್ತುವ ಹಂತಕ್ಕೆ ತಲುಪಿದ್ದಲ್ಲದೆ, ಕಾವೇರಿ ನದಿಯಲ್ಲಿ ಬಂಡೆಗಳ ದರ್ಶನವಾಗುತ್ತಿದೆ.

ಡೆಡ್ ಸ್ಟೋರೇಜ್‌ಗೆ 7 ಅಡಿ ಮಾತ್ರವೇ ಬಾಕಿ!

ಕೆಆರ್‌ಎಸ್‌ನ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 124.80 ಅಡಿ ಇದ್ದರೆ, ಹಾಲಿ 81.80 ಅಡಿ ನೀರಿನ ಮಟ್ಟ ತಲುಪಿತ್ತು. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುಬೇಗ ಡೆಡ್ ಸ್ಟೋರೇಜ್ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ. ಕಾರಣ 74 ಅಡಿಗೆ ಡೆಡ್ ಸ್ಟೋರೇಜ್ ಸಂಗ್ರಹ ಇದೆ.

2016ರಲ್ಲಿ ಡೆಡ್ ಸ್ಟೋರೇಜ್ ತಲುಪಿತ್ತು!

2017ರ ವರೆಗೆ ಕೆಆರ್‌ಎಸ್‌ನಲ್ಲಿ ಹಲವು ಬಾರಿ ನೀರಿನ ಮಟ್ಟದಲ್ಲಿ ಭಾರಿ ಕುಸಿತವಾಗುತ್ತಿತ್ತು. ಆದರೆ, ಆರು ವರ್ಷದಿಂದೀಚೆಗೆ ಉತ್ತಮ ಮಳೆಯಾಗಿ ಯಾವುದೇ ಸಮಸ್ಯೆಯಾಗಿರಲಿಲ್ಲ. 2016ರಲ್ಲಿ ಜಲಾಶಯವು ಡೆಡ್ ಸ್ಟೋರೆಜ್ ತಲುಪಿತ್ತು. ಅದೇ 2017ರಲ್ಲಿ ಮುಂಗಾರು ಅಷ್ಟಾಗಿ ಬಾರದಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಅದೇ 2018ರಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಮೂಲಕ ಪ್ರವಾಹವೇ ಸೃಷ್ಟಿಯಾಗಿತ್ತು. ಹೀಗಾಗಿ ಜಲಾಶಯವೂ ಭರ್ತಿಯಾಗಿತ್ತು. ಕಳೆದ ವರ್ಷವೂ ನವೆಂಬರ್‌ನಲ್ಲಿಯೇ ಜಲಾಶಯ ಭರ್ತಿಯಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version