Site icon Vistara News

Tungabhadra Dam: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ; ನದಿಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ಎಚ್ಚರಿಕೆ

Tungabhadra Dam

ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ಇದರಿಂದ ಅಪಾರ ಪ್ರಮಾಣ ನೀರು ಹರಿದು ಹೋಗುತ್ತಿದೆ. ಗೇಟ್‌ ದುರಸ್ತಿ ಪಡಿಸಲು ಸ್ವಲ್ಪ ಪ್ರಮಾಣದ ನೀರು ಖಾಲಿ ಮಾಡಬೇಕಾಗಿದ್ದು, ಇಂದು ಕೂಡ ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ನದಿಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿದೆ.

ನದಿ ಸಮೀಪ ಮಕ್ಕಳನ್ನು, ಜಾನುವಾರುಗಳನ್ನು ಬಿಡಬಾರದು ಎಂದು ಎಚ್ಚರಿಕೆ ನೀಡಲಾಗಿದ್ದು, ಜನರು ಕೂಡಾ ನದಿ ಬಳಿ ತೆರಳದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಜಿಲ್ಲಾಡಳಿತ ತಿಳಿಸಿದೆ. ʼʼನದಿ ಸಮೀಪಕ್ಕೆ ಮಕ್ಕಳು, ಜಾನುವಾರುಗಳು ಹೋಗದಂತೆ ಎಚ್ಚರವಹಿಸಿ. ಟಿಬಿ ಡ್ಯಾಮ್​ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಯಾರೂ ಕೂಡ ನದಿ ಪಾತ್ರಕ್ಕೆ ಹೋಗಬೇಡಿʼʼ ಎಂದು ಟಿಬಿ ಡ್ಯಾಮ್ ಕೆಳಭಾಗದ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಕಾರಟಗಿ ತಾಲೂಕಿನ ಗ್ರಾಮಗಳಲ್ಲಿ ಡಂಗುರ ಸಾರಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

https://vistaranews.com/wp-content/uploads/2024/08/WhatsApp-Video-2024-08-12-at-9.12.47-AM.mp4

ಇನ್ನೊಂದು ವಾರ ಗೇಟ್ ರಿಪೇರಿ ಸಾಧ್ಯವೇ ಇಲ್ಲ

ವಿಜಯನಗರ: ಭಾನುವಾರ ಜಲಾಶಯಕ್ಕೆ ಭೇಟಿ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಜಲಾಶಯ ಗೇಟ್ ದುರಸ್ತಿಪಡಿಸಲು ಇನ್ನು ಒಂದು ವಾರ ಕಾಯಲೇಬೇಕು ಎಂದು ತಿಳಿಸಿದ್ದಾರೆ. ಸದ್ಯ ನೀರಿನ ಹರಿವು ಹೆಚ್ಚಿರುವುದರಿಂದ ಈಗಲೇ ದುರಸ್ತಿಗೆ ಮುಂದಾದರೆ ತುಂಗಭದ್ರಾ ಆಣೆಕಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಎಚ್ಚರಿಸಿದ್ದ ಹಿನ್ನಲೆಯಲ್ಲಿ ಸ್ವಲ್ಪ ಪ್ರಮಾಣದ ನೀರು ಖಾಲಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ತಂತ್ರಜ್ಞರನ್ನು ಕರೆಸಿ ಗೇಟ್ ರಿಪೇರಿ ಮಾಡಿಸುವ ಪ್ರಯತ್ನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಏನೇ ಕ್ರಮ ಕೈಗೊಂಡರೂ ಗೇಟ್ ದುರಸ್ತಿಗೆ ಒಂದು ವಾರ ಬೇಕೇ ಬೇಕು ಎಂದು ಮೂಲಗಳು ಹೇಳಿವೆ. ಹೀಗಾಗಿ ಇದಕ್ಕೆಲ್ಲ ಕಾರಣ ಆಗಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇಡೀ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಈಗಾಗಲೇ ಸಾಬೀತಾಗಿದೆ. ಗೇಟ್‌ಗಳ ಪರಿಶೀಲನೆ, ನಿರ್ವಹಣೆಯಲ್ಲಿ ಟಿಬಿ ಬೋರ್ಡ್ ಅಧಿಕಾರಿಗಳು ಎಡವಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂ ಗೇಟು ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿ.ಕೆ. ಶಿವಕುಮಾರ್

ನೀರು ಪೋಲಾಗದಂತೆ ಕ್ರಮ: ಶಿವರಾಜ್ ತಂಗಡಗಿ

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹೆಚ್ಚು ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ರೈತರು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಗೇಟ್ ಅಳವಡಿಸಲು ಮುಂದಾಗಿದ್ದಾರೆ. ಸತತವಾಗಿ ಜಲಾಶಯಕ್ಕೆ ಭೇಟಿ ನೀಡಿ ಗೇಟ್ ಅಳವಡಿಸುವ ಕುರಿತು ಸಚಿವ ಶಿವರಾಜ್ ತಂಗಡಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಭಾನುವಾರ ತಡರಾತ್ರಿಯೂ ಜಲಾಶಯಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಅವರು, ಅನ್ನದಾತರ ನೋವಲ್ಲಿ ನಾನು ಭಾಗಿಯಾಗುತ್ತೇನೆ. ಶೀಘ್ರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

Exit mobile version