Site icon Vistara News

Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

Lok Sabha Election 2024

ಬೆಂಗಳೂರು: ಲೋಕಾಸಭಾ ಚುನಾವಣೆ(Lok Sabha Election 2024) ವೇಳೆ ಕಾಂಗ್ರೆಸ್‌ ನೀಡಿರುವ ಜಾಹೀರಾತು, ಸದ್ಯ ಕೈ ಮತ್ತು ಬಿಜೆಪಿ ನಡುವೆ ಟ್ವೀಟ್‌ ಸಮರಕ್ಕೆ ಕಾರಣವಾಗಿದೆ. “ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೆಂಬು” ಎಂಬ ಕಾಂಗ್ರೆಸ್‌ನ ಜಾಹೀರಾತಿಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಎಂದರೆ ಕನ್ನಡಿಗರಿಗೆ ಅನ್ಯಾಯ, ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯವರಿಗೆ ವಾಪಸ್ ನೀಡೋಣ ಚೆಂಬು ಎಂದು‌ ಕಾಂಗ್ರೆಸ್‌ ನಾಯಕರು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿಯ ಮಡಿಲು ಖಾಲಿ ಮಾಡಿ, ನೀವು ಜನರಿಗೆ ಚೆಂಬು ಕೊಟ್ಟಿದ್ದೀರಾ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಜಾಹೀರಾತು ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ನಿಜವಾಗಿಯೂ ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇದೆಯಾ? ಗ್ಯಾರಂಟಿಗಳ ಮೂಲಕ ಜನರಿಗೆ ಟೋಪಿ ಹಾಕ್ತಿರೋದು ಕಾಂಗ್ರೆಸ್‌ನವರು. ಜನರೇ ಕಾಂಗ್ರೆಸ್‌ನವರಿಗೆ ಚೆಂಬು ಕೊಟ್ಟಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | Neha Murder Case: ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ ಸರ್: ಜೋಶಿಗೆ ನೇಹಾ ತಂದೆ ನಿರಂಜನ್ ಮನವಿ

ಈ ಬಗ್ಗೆ ಟೀಟ್‌ ಮಾಡಿರುವ ವಿಜಯೇಂದ್ರ ಅವರು, ಕಾಂಗ್ರೆಸ್‌ನವರೇ… ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೆಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೆಂಬು ಕೊಟ್ಟವರು ನೀವು. ಇದ್ದ ಬದ್ದ ಹಣವನ್ನೆಲ್ಲ ಖಾಲಿಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೆಂಬು ಕೊಟ್ಟವರು ನೀವು. ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು. ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೆಂಬು ಕೊಟ್ಟವರು ನೀವು. ದೇಶದಲ್ಲಿ ಕಾಣದ ‘ಕೈ’ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ‘ಖಾಲಿ ಚೆಂಬು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನರಿಗೆ ಚೆಂಬು ನೀರು ಕೊಟ್ಟಿಲ್ಲ ಇವರು ಎಂದ ಅಶೋಕ್

ವಿಪಕ್ಷನಾಯಕ ಆರ್‌.ಅಶೋಕ್ ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಈಗಾಗಲೇ ಅನೇಕ ಭರವಸೆ ನೀಡಿ ಕೈಗೆ ಚೊಂಬು ಕೊಟ್ಟಿದ್ದಾರೆ. ಗರೀಬಿ ಹಠಾವೋ ಅಂತ ಹೇಳಿದ್ರು, ಯಾರೂ ದೇಶದಲ್ಲಿ ಬಡವರೇ ಇರಲ್ಲ ಅಂತ ಹೇಳಿದ್ರು. ಬಿಪಿಎಲ್ ಕಾರ್ಡ್ ಎಷ್ಟಿವೆ? ಹತ್ತು ಕೆ.ಜಿ ಅಕ್ಕಿ ಅಂತ ಹೇಳಿದರು, ಕೊಟ್ರಾ? ಕೃಷ್ಣೆಗೆ 50 ಸಾವಿರ ಕೋಟಿ ಅಂತ ಹೇಳಿದ್ದರು. 5 ರೂಪಾಯಿಯೂ ಕೊಡಲಿಲ್ಲ. ಎಚ್.ಕೆ ಪಾಟೀಲ್ ಅವರೇ ಕೃಷ್ಣೆ ಕಣ್ಣೀರು ಅಂತ ಪುಸ್ತಕ ಬಿಡುಗಡೆ ಮಾಡಿದರು, ಕೇಳಿದರೆ ದೇಶಕ್ಕೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ ಬರೀ ಭ್ರಷ್ಟಾಚಾರ. ಪತ್ರಿಕೆ ಬೇಡ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಕೆಲವರು ಸುಮ್ಮನಿದ್ದರು. ಇವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನೂ ಬಿಡಲಿಲ್ಲ‌. ಪತ್ರಿಕಾ ರಂಗವನ್ನೂ ಬಿಡದೆ ಲೂಟಿ ಹೊಡೆದಿದ್ದು ಕಾಂಗ್ರೆಸ್ ನಾಯಕರು. ಇನ್ಯಾವ ಅಂಗ ಬಿಟ್ಟಿದ್ದೀರಿ. ನೀವು ಚೆಂಬು ಅಂತ ಜಾಹೀರಾತು ಕೊಟ್ಟಿದ್ದೀರಿ, ಚೆಂಬಿನಷ್ಟು ನೀರು ಕೊಟ್ಟಿಲ್ಲ ನಿಮ್ಮ ಯೋಗ್ಯತೆಗೆ. ಅಲ್ಲಿ ಚೆಂಬಲ್ಲಿ ನೀರಿಲ್ಲ, ಕೇರಳಕ್ಕೆ ಬನ್ನಿ ಬಿಂದಿಗೆಯಲ್ಲಿ ನೀರು ಕೊಡ್ತೀವಿ ಅಂತ ಕರೀತಿದ್ದಾರೆ. ಚೆಂಬು ಇಟ್ಟುಕೊಂಡು ಕೇರಳಕ್ಕೆ ಹೋಗಿ. ಇದುವರೆಗೂ 700 ಕೋಟಿ SDRF ಹಣ ಬಿಡುಗಡೆ ಆಗಿದ್ದು, ಅದು ಕೇಂದ್ರದ ಪರಿಹಾರ. ಶೇ. 75 ಕೇಂದ್ರದ ಹಣ, ಇವರದ್ದಲ್ಲ. ಅದನ್ನು ಎಂದಾದರೂ ಹೇಳಿದ್ದಾರಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

ಚೆಂಬು ಜಾಹೀರಾತು ವಿಚಾರಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಹತ್ತು ವರ್ಷಗಳ ಮನಮೋಹನ್ ಸಿಂಗ್ ಸರ್ಕಾರ ಮತ್ತು ಮೋದಿ ಸರ್ಕಾರದ ತುಲನೆ ಮಾಡಬೇಕು. ತಮಿಳುನಾಡಿನಲ್ಲಿ ನಮ್ಮ ಒಂದೇ ಒಂದು ಸೀಟಿಲ್ಲ. ಅಲ್ಲಿ UPA ಏನು ಕೊಟ್ಟಿದೆ, NDA ಏನು ಕೊಟ್ಟಿದೆ. ಯಾರು ಯಾರಿಗೆ ಚೆಂಬು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

Exit mobile version