ಬಾಗಲಕೋಟೆ: ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೂ ಮೋಸ ಮಾಡುವವರಿರುತ್ತಾರೆ ಎಂಬ ಮಾತಿದೆ. ಇದಕ್ಕೆ ತಕ್ಕಂತೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಎಂದು ಹೇಳಿ ಮುಗ್ಧ ರೈತರು, ಯುವಕರ ಜತೆ ನಯವಾಗಿ ಮಾತನಾಡಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ವಂಚಕರನ್ನು ಬಂಧಿಸಿದ್ದಾರೆ.
ಜನೋಪಕಾರಿ ಎಂದು ಊರ ತುಂಬಾ ಹೇಳಿಕೊಂಡವನ ಅಸಲಿ ಬಣ್ಣ ಬಯಲಾಗಿದೆ. ಹಣ ಕಳೆದುಕೊಂಡವರ ನೋವು ಮುಗಿಲು ಮುಟ್ಟಿದೆ.
ನಡೆದಿದ್ದೇನು?
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣಕುಡೆ ಎಂಬ ಗ್ರಾಮದ ಆರೋಪಿ ರಾಜು ದೊಡ್ಡಮನಿ, ಈತನ ಚಿಕ್ಕಪ್ಪ ಅಶೋಕ ದೊಡ್ಡಮನಿ ಬಂಧಿತರು. ಎಲ್ಲೇ ಹೋದರೂ ಯುವಕರ ಗುಂಪು, ಅಲ್ಲೊಂದು ಫೋಟೊ ಪೋಸು, ಹೋದ ಹೋದಲ್ಲೆಲ್ಲಾ ಯುವಕರ ತಂಡಗಳಿಗೆ ಗಿಪ್ಟ್. ಒಂದಿಷ್ಟು ಜನರಿಗೆ ದುಡ್ಡು ಕೊಟ್ಟು ಹವಾ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ ಆರೋಪಿ ರಾಜು ದೊಡ್ಡಮನಿ ಅಲಿಯಾಸ್ ರಾಜು ಗಸ್ತಿ, ಗಂಗಾ ಕಲ್ಯಾಣ ಯೋಜನೆ ಅಧಿಕಾರಿ ಎಂದು ಸುಳ್ಳು ಹೇಳಿ ಮುಗ್ಧ ರೈತರಿಗೆ ಮೋಸ ಮಾಡುತ್ತಿದ್ದ.
ಹೊಲಕ್ಕೆ ಬೋರ್‌ವೆಲ್ ಹಾಕಿಸಿಕೊಡುವುದಾಗಿ ರೈತರನ್ನು ನಂಬಿಸಿ ನೂರಾರು ರೈತರಿಂದ ₹50 ಸಾವಿರದಿಂದ ₹1 ಲಕ್ಷ ವರೆಗೆ ಮನಬಂದಂತೆ ಹಣ ಪಡೆದು ಯಾಮಾರಿಸುತ್ತಿದ್ದ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಂಟೂರು ಗ್ರಾಮದ ರಾಮಪ್ಪ ಜಾನಮಟ್ಟಿ ಬಳಿ ₹50 ಸಾವಿರ, ಮೈಬುಸಾಬ ನದಾಫ್ ಬಳಿ ₹50 ಸಾವಿರ, ಗೋವಿಂದಪ್ಪ ಗಸ್ತಿ ಎಂಬುವವರ ಬಳಿ ₹1 ಲಕ್ಷ ಪಡೆದು ಲಪಟಾಯಿಸಿದ್ದಾನೆ. ಕೊಟ್ಟವರು ಹಣವೂ ಇಲ್ಲದೆ, ಬೋರ್‌ವೆಲ್ ಕೂಡ ಇಲ್ಲದೆ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ.
ಇದನ್ನೂ ಓದಿ | PSI Scam | ಫಸ್ಟ್ ರ‍್ಯಾಂಕ್ ಕುಶಾಲ್ ಅರೆಸ್ಟ್
ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣಕುಡೆ ಎಂಬ ಗ್ರಾಮದ ಆರೋಪಿ, ಕಳೆದ ಮೂರು ನಾಲ್ಕು ವರ್ಷದಿಂದ ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ. ಎಲ್ಲ ಕಡೆ ಗಂಗಾ ಕಲ್ಯಾ ಯೋಜನೆ ಅಧಿಕಾರಿ ಎಂದು ಯಾಮಾರಿಸಿದ್ದಾನೆ. ಇದಷ್ಟೇ ಅಲ್ಲದೆ ಕೃಷಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ₹3 ಲಕ್ಷ, ₹10 ಲಕ್ಷದಂತೆ ನಿರುದ್ಯೋಗಿ ಯುವಕರಿಗೂ ಯಾಮಾರಿಸಿದ್ದಾನೆ.
ಮಂಟೂರು ಗ್ರಾಮದ ಸುಧೀರ್ ಮಲಘಾಣ್ ಎಂಬಾತನ ಸಹೋದರನಿಗೆ ಗಂಗಾ ಕಲ್ಯಾಣ ಇಲಾಖೆಯಲ್ಲಿ ಸೂಪರ್‌ವೈಸರ್ ನೌಕರಿ ಕೊಡಿಸುವುದಾಗಿ ₹3.5 ಲಕ್ಷ ವಸೂಲಿ ಮಾಡಿದ್ದಾನೆ. ಇನ್ನು ಕಿಸಾನ್ ಯೋಜನೆ ಮೂಲಕ ಟ್ರ್ಯಾ ಕ್ಟರ್ ಕೊಡಿಸುವುದಾಗಿ ಮೋಸ ಮಾಡಿರುವುದಾಗಿಯೂ ತಿಳಿದು ಬಂದಿದೆ.
ಇದೇ ರೀತಿ ಬಾಗಲಕೋಟೆ ಜಿಲ್ಲಾದ್ಯಂತ ಇದುವರೆಗೂ ಒಟ್ಟು ₹2 ಕೋಟಿಗೂ ಅಧಿಕ ಹಣ ಲಪಟಾಯಿಸಿ ವಂಚನೆ ಮಾಡಿದ್ದಾನೆ. ಬಂದ ಹಣದಲ್ಲಿ ನಾಲ್ಕು ಕಾರು, ಒಂದು ಕೋಟಿ ಮೊತ್ತದ ಮನೆ, 20 ತೊಲೆ ಚಿನ್ನ ಖರೀದಿಸಿದ್ದಾನೆ. ಚಿಕ್ಕಪ್ಪನ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾನೆ ಎಂಬ ಆರೋಪವಿದೆ.
ಸದ್ಯಕ್ಕೆ ಈತ ಹಾಗೂ ಈತನ ಚಿಕ್ಕಪ್ಪ ಅಶೋಕ ದೊಡ್ಡಮನಿ ವಿರುದ್ಧ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಎಫ್ಐಆರ್ ದಾಖಲಾಗಿದ್ದು, ರಾಜು ದೊಡ್ಡಮನಿ ಹಾಗೂ ಅಶೋಕ ದೊಡ್ಡಮನಿ ಇಬ್ಬರನ್ನೂ ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಸದ್ಯಕ್ಕೆ ಎರಡು ಕೋಟಿ ರೂಪಾಯಿಯಷ್ಟು ಮೋಸ, ವಂಚನೆ ಮಾಡಿದ ಅಂದಾಜಿದೆ. ಇನ್ನೂ ಹೆಚ್ಚು ಜನರಿಗೆ ಮೋಸ ಮಾಡಿದ ಮಾಹಿತಿ ಇದ್ದು, ದೂರುಗಳನ್ನು ದಾಖಲಿಸಿಕೊಂಡು ತನಿಖೆ ಮಾಡುವುದಾಗಿ ಎಸ್.ಪಿ.ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಇದನ್ನೂ ಓದಿ | ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್