ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಡಿಸೆಂಬರ್ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿಗೆ ಮೊದಲೇ ದತ್ತಪೀಠಕ್ಕೆ ಅರ್ಚಕರ ನೇಮಕವಾಗಿದೆ. 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಬಿಜೆಪಿ ಸರ್ಕಾರ ಉಳಿಸಿಕೊಂಡಿದೆ ಎಂದು ಪಕ್ಷ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಸರ್ಕಾರ ರಚಿಸಿದ ನಿರ್ವಹಣಾ ಮಂಡಳಿಯ ಶಿಫಾರಸಿನ ಮೇರೆಗೆ ಇಬ್ಬರು ಅರ್ಚಕರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಶೃಂಗೇರಿ ಮೂಲದ ಶ್ರೀಕಾಂತ್, ಚಿಕ್ಕಬಳ್ಳಾಪುರದ ಸಂದೀಪ್ ಅವರು ನೇಮಕಗೊಂಡ ಅರ್ಚಕರು.
ಸರ್ಕಾರ ಅರ್ಚಕರನ್ನು ನೇಮಕ ಮಾಡಿದ್ದರಿಂದಾಗಿ ಈ ಬಾರಿ ಹಿಂದೂ ಅರ್ಚಕರ ಸಮ್ಮುಖದಲ್ಲಿ ದತ್ತ ಜಯಂತಿ ನಡೆಯಲಿದೆ ಎಂದು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ದತ್ತ ಜಯಂತಿಗೆ ಅನುಮತಿ ಕೊಟ್ಟಿತ್ತು ಹೈಕೋರ್ಟ್
ರಾಜ್ಯ ಸರ್ಕಾರ ದತ್ತ ಪೀಠ ಪೂಜೆಗೆ ಅರ್ಚಕರನ್ನು ನೇಮಿಸಲು ನಿರ್ವಹಣಾ ಸಮಿತಿ ರಚಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅರ್ಚಕರ ನೇಮಕ ಪ್ರಶ್ನಿಸಿ ಗೌಸ್ ಮೌಸಿನ್ ಶಾ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದತ್ತ ಜಯಂತಿ ಆಚರಣೆಗೆ ಅವಕಾಶವನ್ನು ನೀಡಿದೆ. ಹೀಗಾಗಿ ಈ ಬಾರಿ ಯಾವುದೇ ಗೊಂದಲವಿಲ್ಲದೆ ದತ್ತಜಯಂತಿ ನಡೆಸಲು ಅವಕಾಶ ದೊರೆತಂತಾಗಿದೆ.
ದತ್ತ ಪೀಠ ವಿವಾದವೇನು?
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೇ, ಹಿಂದೂಗಳಿಗೆ ಸೇರಿದ್ದೇ ಎನ್ನುವುದು ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸರಕಾರಿ ದಾಖಲೆಗಳಲ್ಲಿ ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿ ಇದು ಗುರುತಿಸಲ್ಪಟ್ಟಿತ್ತು. ಆದರೆ, ಬಳಿಕ ವಿವಾದ ಹುಟ್ಟಿಕೊಂಡಿತು.
ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದರು. ಆದರೆ, ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದಾರೆ. ಇದೀಗ ಆಡಳಿತ ಮಂಡಳಿಯ ಶಿಫಾರಸಿನಂತೆ ಅರ್ಚಕರ ನೇಮಕವೂ ನಡೆದಿದೆ.
ಇದನ್ನೂ ಓದಿ | ದತ್ತಪೀಠ ವಿವಾದ | ಡಿ.6ರಿಂದ ಮೂರು ದಿನ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್