Site icon Vistara News

Cobras trapped : 15 ದಿನಗಳಿಂದ ಮನೆಯಲ್ಲಿ ಅವಿತು ಕುಳಿತಿದ್ದ ಬೃಹತ್‌ ಗಾತ್ರದ ಜೋಡಿ ನಾಗರ ಕೊನೆಗೂ ಸೆರೆ!

Nagara havu

#image_title

ಕಾರವಾರ: ಕಳೆದ 15 ದಿನಗಳಿಂದ ಮನೆಯೊಂದರಲ್ಲಿ ಅವಿತುಕೊಂಡು ಆತಂಕ ಮೂಡಿಸಿದ್ದ ಜೋಡಿ ನಾಗರ ಹಾವುಗಳನ್ನು ಕೊನೆಗೂ ಸೆರೆ ಹಿಡಿದು (Cobras trapped) ಕಾಡಿಗೆ ಬಿಡಲಾಗಿದೆ.

ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮಿನಗರ ನಿವಾಸಿ ರಾಮು ಎನ್ನುವವರ ಮನೆಯಲ್ಲಿ ಕಳೆದ ಹದಿನೈದು ದಿನಗಳಿಂದ ಎರಡು ಹಾವುಗಳು ಅವಿತುಕೊಂಡಿದ್ದವು‌. ಹಾವುಗಳನ್ನು ಕಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಹಾವುಗಳನ್ನ ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಸತತವಾಗಿ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಜೋಡಿ ನಾಗರಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರೀ ಗಾತ್ರದ ಹಾವುಗಳು

ಇನ್ನು ಮನೆಯಲ್ಲಿ ಅವಿತಿದ್ದ ಹಾವುಗಳನ್ನು ಹೊರಗೆ ತರುತ್ತಿರುವಂತೆ ಹಾವುಗಳ ಗಾತ್ರ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಒಂದು ನಾಗರಹಾವು ಸುಮಾರು 6.6 ಅಡಿ ಗಾತ್ರದ್ದಾಗಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ 5 ರಿಂದ 5.5 ಅಡಿ ಗಾತ್ರದ ನಾಗರಹಾವುಗಳು ಈ ಭಾಗದಲ್ಲಿ ಕಾಣಸಿಗುತ್ತಿದ್ದವು. ಆದರೆ 6.6 ಅಡಿ ಗಾತ್ರದ ನಾಗರಹಾವು ಸಿಕ್ಕಿದ್ದು ಬಹಳ ಅಪರೂಪವಾಗಿದೆ. ಉಪವಲಯ ಅರಣ್ಯಾಧಿಕಾರಿ‌ ಮಧುಕುಮಾರ್ ಡಿ.ಎಚ್ ಹಾಗೂ ಆನಂದ್ ಬಜರಂಗ್ ನೇತೃತ್ವದಲ್ಲಿ, ಅರಣ್ಯ ರಕ್ಷಕ ಅಬ್ದುಲ್ ಅವರ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ.

4 ರಿಂದ 5.5 ಅಡಿ ಗಾತ್ರದ ನಾಗರ ಹಾವುಗಳು ಸಾಮಾನ್ಯ

ಪಶ್ವಿಮಘಟ್ಟ ಪ್ರದೇಶದಲ್ಲಿ 4ರಿಂದ 5.5 ಅಡಿ ಗಾತ್ರದ ನಾಗರಹಾವುಗಳು ಸಾಮಾನ್ಯವಾಗಿ ದಾಖಲಾಗಿರುತ್ತವೆ. ಆದರೆ ಸುಮಾರು 6 ಅಡಿಗಿಂತ ಹೆಚ್ಚಿನ ಗಾತ್ರದ ನಾಗರಹಾವು ವಿರಳ ಎಂದು ಹೇಳಬಹುದು. ಬಯಲು ಸೀಮೆಯಲ್ಲಿ 6 ರಿಂದ 6.5 ಅಡಿಯವರೆಗಿನ ಉದ್ದದ ನಾಗರ ಹಾವುಗಳು ಸಾಮಾನ್ಯ ಎನ್ನುತ್ತಾರೆ‌ ಜೀವವೈವಿಧ್ಯ ಸಂಶೋಧಕ‌ ಮಂಜುನಾಥ.ಎಸ್.ನಾಯಕ.

ಇದನ್ನೂ ಓದಿ : ಮನೆಯಲ್ಲಿನ ಶಿವನ ಮೂರ್ತಿ ಪಕ್ಕವೇ ಹೆಡೆ ಬಿಚ್ಚಿ ಕುಳಿತ ನಾಗರಹಾವು : ಅಚ್ಚರಿಯಿಂದ ನೋಡಿದ ಜನ

Exit mobile version