Site icon Vistara News

RSS ಮುಖಂಡನ ಕಾರಿನ ಮೇಲೆ KILL U ಎಂದು ಬರೆದವರ ಗುರುತು ಪತ್ತೆ: ಕೃತ್ಯದ ಹಿಂದೆ ನಿಜಕ್ಕೂ ಷಡ್ಯಂತ್ರವಿತ್ತಾ?

RSS Chikkamagaluru

ಚಿಕ್ಕಮಗಳೂರು: ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಚೇರಿ ಮತ್ತು ಮುಖಂಡರ ಮೇಲೆ ದಾಳಿ ನಡೆದ ಬೆನ್ನಿಗೇ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ಆ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರಾದ ಡಾ. ಶಶಿಧರ್ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ KILL U, JIHAD ಮೊದಲಾದ ಬರಹಗಳನ್ನು ಬರೆಯಲಾಗಿತ್ತು.

ಕಡೂರಿನ ಲಕ್ಷ್ಮೀಶನಗರದ ಮನೆಯ ಹತ್ತಿರ ನಿಲ್ಲಿಸಿದ್ದ ನೀಲಿ ಬಣ್ಣದ ಕಾರು ಇದಾಗಿದ್ದು, ಕಿಲ್‌ ಯೂ, ಜಿಹಾದಿ ಮಾತ್ರವಲ್ಲದೆ, ಕೆಲವೊಂದು ಅಶ್ಲೀಲ ಪದಗಳನ್ನು ಕೂಡಾ ಬರೆಯಲಾಗಿತ್ತು. ಜತೆ ಕಾರಿನ ಚಕ್ರಗಳ ಗಾಳಿಯನ್ನೂ ತೆಗೆಯಲಾಗಿದೆ. ಶಶಿಧರ್‌ ಚಿಂದಿಗೆರೆ ಅವರು ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದರಿಂದ ಅವರಿಗೆ ಬೆದರಿಕೆ ರೂಪದಲ್ಲಿ ಈ ಬರಹ ಬರೆಯಲಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇರಬಹುದು ಎಂದು ಸದ್ದಾಗಿತ್ತು. ರಾಷ್ಟ್ರಾದ್ಯಂತ ಪಿಎಫ್‌ಐ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂಬ ಸುದ್ದಿಗೆ ಇದೂ ಜೋಡಣೆಯಾಗಿತ್ತು. ಹೀಗಾಗಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು.

ಪತ್ತೆಯಾದರು ಬರೆದವರು
ಈ ನಡುವೆ ತನಿಖೆ ನಡೆಸಿದ ಪೊಲೀಸರಿಗೆ ಅಂತಿಮವಾಗಿ ಇಬ್ಬರು ಕೈಗೆ ಸಿಕ್ಕರು. ಅವರನ್ನು ಕರೆಸಿಕೊಂಡು ನೋಡಿದರೆ ಇಬ್ಬರೂ ಅಪ್ರಾಪ್ತ ಬಾಲಕರು. ಕಡೂರು ಪೊಲೀಸರು ಅವರನ್ನು ಬಂಧಿಸಿ ಐಪಿಸಿ 427, 505 (2), 506 ಅಡಿ ಪ್ರಕರಣ ದಾಖಲಿಸಿಕೊಂಡರು. ಅಂತಿಮವಾಗಿ ಗೊತ್ತಾಗಿದ್ದೇನೆಂದರೆ, ಇದು ಯಾವ ಜಿಹಾದಿಯೂ ಇಲ್ಲ, ಕೊಲೆ ಬೆದರಿಕೆಯೂ ಅಲ್ಲ. ಬದಲಾಗಿ ʻಇಂತಹ ಕಾರನ್ನು ಕೊಳ್ಳಲು ಆಗುವುದಿಲ್ಲʼ ಎಂಬ ಹತಾಶೆಯಿಂದ ಬಾಲಕರು ಕಲ್ಲಿನಿಂದ ಗೀಚಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ| ಆರೆಸ್ಸೆಸ್‌ ಧರ್ಮ ಜಾಗರಣ ಮುಖಂಡನ ಕಾರಿನ ಮೇಲೆ KILL YOU, JIHAD ಬರಹ, ಚಕ್ರದ ಗಾಳಿ ತೆಗೆದು ಬೆದರಿಕೆ

Exit mobile version