Site icon Vistara News

Kittur Utsav | ಎರಡು ದಿನಗಳ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ವೈಭವದ ತೆರೆ

Kittur Utsav

| ಅನಿಲ್ ಕಾಜಗಾರ, ಬೆಳಗಾವಿ
ಈ ಬಾರಿಯ ಕಿತ್ತೂರು ಉತ್ಸವವನ್ನು(Kittur Utsav) ಜನಪ್ರತಿನಿಧಿಗಳ ಹೊರತಾಗಿಯೂ ಜನರೇ ಗೆಲ್ಲಿಸಿದರು. ಸೋಮವಾರ ಬೆಳಗ್ಗೆ ಅದ್ಧೂರಿ ಮೆರವಣಿಗೆ ಮೂಲಕ ನಾಂದಿ ಹಾಡಿದ್ದ ಉತ್ಸವಕ್ಕೆ ಮಂಗಳವಾರ ವೈಭವದ ತೆರೆ ಬಿದ್ದಿತು. ಎರಡು ದಿನಗಳ ಉತ್ಸವಕ್ಕೆ ನಾಡಿನ ಮೂಲೆಮೂಲೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಸಾಕ್ಷಿಯಾದರು.

ಮೂರು ಸಮಾನಾಂತರ ವೇದಿಕೆಗಳಲ್ಲಿ ತಲಾ 40 ಸಂಸ್ಕೃತಿ, ಸಾಹಿತ್ಯದ ಕಾರ್ಯಕ್ರಮಗಳು, ವಿವಿಧ ವಿಚಾರ ಗೋಷ್ಠಿಗಳು ಐತಿಹಾಸಿಕ ಹಾಗೂ ಸೈದ್ಧಾಂತಿಕ ವಿಚಾರಗಳಿಗೆ ವೇದಿಕೆಯಾದವು. ಜನಪದ, ಲಂಬಾಣಿ, ಶಾಸ್ತ್ರೀಯ ಸಂಗೀತ, ಸಮಕಾಲೀನ ನೃತ್ಯಗಳು, ಸಿನಿಮಾ ಗೀತೆಗಳ ಗಾಯನವನ್ನು ಜನ ಮಂಗಳವಾರ ತಡರಾತ್ರಿಯವರೆಗೂ ಆಸ್ವಾದಿಸಿದರು.

ಇದನ್ನೂ ಓದಿ | Kittur Utsav | ಕಿತ್ತೂರು ಬಳಿ 1,000 ಎಕರೆ ಕೈಗಾರಿಕಾ ಟೌನ್‌ ಶಿಪ್ ನಿರ್ಮಾಣ: ಸಿಎಂ ಬೊಮ್ಮಾಯಿ ಘೋಷಣೆ

ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ ಚೆನ್ನಮ್ಮನ ಕಿತ್ತೂರು ಉತ್ಸವ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ನಿಧನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಡೆಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸತತವಾಗಿ ಎರಡನೇ ಬಾರಿ ಕಿತ್ತೂರು ಉತ್ಸವಕ್ಕೆ ಸೋಮವಾರ ಚಾಲನೆ ನೀಡಿದ್ದರು. ರಾತ್ರಿ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ತಂಡದಿಂದ ಸಾಂಸ್ಕೃತಿಕ ವೈಭವ ಅನಾವರಣಗೊಂಡರೆ, ಮಧ್ಯರಾತ್ರಿ ಎರಡು ಗಂಟೆಯವರೆಗೂ ಖ್ಯಾತ ಗಾಯಕ ವಿಜಯ ಪ್ರಕಾಶ್ ರಸಮಂಜರಿ ಕಾರ್ಯಕ್ರಮ ನೆರವೇರಿಸಿದರು.

ಮಂಗಳವಾರ ಉತ್ಸವದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಗಮನ ಸೆಳೆಯಿತು. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ 234 ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 55 ಕೆ.ಜಿ ಮಹಿಳೆಯರ ವಿಭಾಗದಲ್ಲಿ ಹಳಿಹಾಳದ ಗಾಯತ್ರಿ ಸುತಾರ್ ರಾಣಿ ಚೆನ್ನಮ್ಮ ಕಿಶೋರಿ ಪ್ರಶಸ್ತಿಗೆ ಪಾತ್ರರಾದರು. ಈ ಬಾರಿ ಕಿತ್ತೂರು ಹೊರವಲಯದ ತುಂಬುಕೆರೆಯಲ್ಲಿ ದೋಣಿ ವಿಹಾರ ಹಾಗೂ ಜಲಸಾಹಸ ಕ್ರೀಡೆ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿತು. ಒಟ್ಟು ಮೂರು ಭವ್ಯವಾದ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನೆರವೇರಿದವು. ರಾತ್ರಿ 10 ಗಂಟೆಗೆ ರಘು ದೀಕ್ಷಿತ್ ಮತ್ತು ತಂಡದಿಂದ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ಇನ್ನು ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಹಲವು ಜನಪ್ರತಿನಿಧಿಗಳು ಕೈ ಕೊಟ್ಟಿದ್ದು ಎದ್ದು ಕಾಣುತ್ತಿತ್ತು. ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಹಲವು ಸಚಿವರು ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದರೂ ಸಮಾರಂಭಕ್ಕೆ ಹಾಜರಾಗಿದ್ದು ಕೆಲವೇ ಕೆಲವು ಜನಪ್ರತಿನಿಧಿಗಳು ಮಾತ್ರ. ಸಮಾರೋಪ ಸಮಾರಂಭದ ಘನ ಉಪಸ್ಥಿತಿ ವಹಿಸಬೇಕಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಗೈರಾಗಿದ್ದರು. ರಾಜ್ಯಮಟ್ಟದ ಉತ್ಸವ ಮಾಡಿದರೂ ಬೆಳಗಾವಿ ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ಶಾಸಕರು ಉತ್ಸವದಲ್ಲಿ ಭಾಗಿಯಾಗಲಿಲ್ಲ. ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಕಿತ್ತೂರು ಉತ್ಸವಕ್ಕೆ ಬಾರದೇ ಬೇಜವಾಬ್ದಾರಿ ತೋರಿದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮಾರೋಪ ಸಮಾರಂಭದಲ್ಲಿ ಕಿತ್ತೂರು ಶಾಸಕ ದೊಡ್ಡಗೌಡರ ಮಾತನಾಡಿ, ರಾಜ್ಯಮಟ್ಟದ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿರುವುದು ಸುವರ್ಣ ಅಕ್ಷರದಲ್ಲಿ ತಮ್ಮ ಕೊಡುಗೆ ಬರೆದಿಡುವಂತಾಗಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಿಸುವಂತೆ ಬೆಳೆಯಲಿದೆ. ಪ್ರತಿ ವರ್ಷ ವೀರಜ್ಯೋತಿ ಜಿಲ್ಲೆಯಲ್ಲಿ ಸಂಚರಿಸುತಿತ್ತು. ಆದರೆ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಘೋಷಿಸಿ, ವೀರಜ್ಯೋತಿ ರಾಜ್ಯಾದ್ಯಂತ ಸಂಚರಿಸುವಂತೆ ಅದ್ಧೂರಿ ಉತ್ಸವ ಆಚರಣೆಗೆ ಚಾಲನೆ ನೀಡಿದ ಕೀರ್ತಿ ಸಿಎಂ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.

ಕಳೆದ ವರ್ಷ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಕಾರ್ಯಕ್ರಮ ಈಗ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಕಿತ್ತೂರು ಉತ್ಸವ ಆಚರಣೆ ಪ್ರತಿ ವರ್ಷ 3 ಲಕ್ಷ ಅನುದಾನ ಇತ್ತು. ಕಳೆದ ವರ್ಷ 1 ರೂಪಾಯಿ ಕೋಟಿ ಅನುದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈಗ ರಾಜ್ಯ ಸರ್ಕಾರ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಘೋಷಣೆ ಮಾಡಿದ ನಂತರ 2 ಕೋಟಿ ಅನುದಾನ ನೀಡಿದೆ. ಕಿತ್ತೂರು ಉತ್ಸವ ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಮನಸೂರೆಗೊಂಡ ‘ಚನ್ನಮ್ಮ’ ನೃತ್ಯ ರೂಪಕ; ಗಮನ ಸೆಲೆದ ಸ್ತ್ರೀ ವೇಷಧಾರಿ ಪುರುಷ

ಚನ್ನಮ್ಮನ ವೇಷಧರಿಸಿ ನೃತ್ಯರೂಪಕ ಪ್ರದರ್ಶನ ನೀಡಿದ ಕಲಾವಿದರೊಬ್ಬರು ಕಿತ್ತೂರು ಉತ್ಸವದಲ್ಲಿ ಎಲ್ಲರ ಗಮನ ಸೆಳೆದರು. ಬಸವರಾಜ ಬಲಕುಂದಿ ಎಂಬುವವರು ಸ್ತ್ರೀ ವೇಷಧಾರಿಯಾಗಿ ಮನೋಜ್ಞ ಹಾವಭಾವ, ಆಕರ್ಷಕ ದಿರಿಸು, ಬಗೆ ಬಗೆ ಆಭರಣ ಧರಿಸಿ ನೃತ್ಯರೂಪಕದ ಮೂಲಕ ಗಮನ ಸೆಳೆದರು.

ಮೂಲತ: ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದ ಬಸವರಾಜ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕಲೆಯನ್ನು ಆರಾಧಿಸುವುದಕ್ಕೆ ಆರಂಭಿಸಿದ್ದಾರೆ. ಇಲ್ಲಿವರೆಗೆ ರಾಜ್ಯದ 30 ಜಿಲ್ಲೆ, ರಾಷ್ಟೃದ 15 ರಾಜ್ಯ ಹಾಗೂ ವಿಶ್ವದ 10 ದೇಶಗಳಲ್ಲಿ ಬರೋಬ್ಬರಿ 1800ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕೂಚುಪುಡಿಯಲ್ಲಿ ರಾಜ್ಯದ ಮೊದಲ ಸ್ತ್ರೀ ವೇಷಧಾರಿ ಪುರುಷ ಅನ್ನುವ ಹೆಗ್ಗಳಿಕೆ ಪಡೆದುಕೊಂಡಿರುವ ಬಸವರಾಜ, ಇಲ್ಲಿವರೆಗೆ ಕಿತ್ತೂರು ಚೆನ್ನಮ್ಮ, ಸೀತೆ, ಪಾರ್ವತಿ, ಕಾಳಿ, ದುರ್ಗೆ, ಸತ್ಯಭಾಮೆ ಸೇರಿ ಹತ್ತಾರು ಐತಿಹಾಸಿಕ ಸ್ತ್ರೀ ಪಾತ್ರಗಳಲ್ಲಿ ಜನರನ್ನು ರಂಜಿಸಿದ್ದಾರೆ.

ಇದನ್ನೂ ಓದಿ | Kittur Utsav | ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಲಕ್ಷ್ಮೀಬಾಯಿ ಅಲ್ಲ, ಕಿತ್ತೂರು ಚೆನ್ನಮ್ಮ: ಸಿಎಂ ಬೊಮ್ಮಾಯಿ

Exit mobile version