Site icon Vistara News

Chikkaballapur News: ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲು

Two die after drowning while fishing

ಚಿಕ್ಕಬಳ್ಳಾಪುರ: ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ (Chikkaballapur News) ಶಿಡ್ಲಘಟ್ಟ ತಾಲೂಕಿನ ಪಾಪಾಘ್ನಿ ನದಿಯಲ್ಲಿ ನಡೆದಿದೆ. ಪಲಿಚೇರ್ಲು ಗ್ರಾಮದ ಮಂಜುನಾಥ (32), ಮಂಜುನಾಥ (42) ಮೃತರು. ಮೀನು ಹಿಡಿಯುವಾಗ ಕಾಲಿಗೆ ಮೀನಿನ ಬಲೆ ಸಿಲುಕಿ ಇವರು ನೀರಿನಲ್ಲಿ ಮುಳುಗಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿದ್ರೆ ಮಂಪರಿನಲ್ಲಿ ಐದು ವಾಹನಗಳಿಗೆ ಗುದ್ದಿದ ಕಾರು; ಒಬ್ಬ ಸಾವು, ಮೂವರು ಗಂಭೀರ

ಚಿಕ್ಕಬಳ್ಳಾಫುರ: ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಿದ್ದ ತಳ್ಳುವ ಗಾಡಿ ಹಾಗೂ ಎರಡು ಬೈಕ್‌ಗಳಿಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿವೆ.

ವೇಗವಾಗಿ ಬಂದ ಕಾರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಚಿನ್ನಸಂದ್ರ ನಿವಾಸಿ ಸೈಯದ್ ಬಸೀರ್ (65) ಮೃತಪಟ್ಟಿದ್ದಾರೆ. ಜಾಕೀರ್ ಖಾನ್, ಪೈರೋಜ್ ಖಾನ್, ಜಹೀರ್‌ಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರಿನಲ್ಲಿ ಬೆಂಗಳೂರು ಕಡೆಯಿಂದ ಚಿಂತಾಮಣಿ ಕಡೆಗೆ ಬರಲಾಗುತ್ತಿತ್ತು. ಈ ವೇಳೆ ಚಾಲಕನಿಗೆ ನಿದ್ದೆ ಮಂಪರು ಬಂದಿದೆ ಎನ್ನಲಾಗಿದ್ದು, ಕಾರಿನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ ಎನ್ನಲಾಗಿದೆ. ಈ ವೇಳೆ ತಳ್ಳುಗಾಡಿ ಹಾಗೂ ನಿಲ್ಲಿಸಲಾಗಿದ್ದ ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರು ಹಾಗೂ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿತಾಣ ಬಲಮುರಿ ಬಳಿಯ ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಮೈಸೂರು ಮೂಲದ ಧನರಾಜ್ (21) ಹಾಗೂ ಪ್ರಸನ್ನ (33) ಮೃತ ಯುವಕರು. ಪ್ರವಾಸಕ್ಕೆಂದು ಬಂದು ನದಿಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ (Mandya News) ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕಾಲಿನ ಮೇಲೆ ಹರಿದ ಬಿಎಂಟಿಸಿ ಬಸ್, ಕಾಲು ಕಟ್

ಬೆಂಗಳೂರು: ವ್ಯಕ್ತಿಯೊಬ್ಬರ ಕಾಲಿನ ಮೇಲೆ ಬಿಎಂಟಿಸಿ ಬಸ್ ಹರಿದು ಎರಡೂ ಕಾಲುಗಳು ತುಂಡಾಗಿವೆ. ಬೆಂಗಳೂರಿನ ಯಶವಂತಪುರ ಸರ್ಕಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ 9.30ಕ್ಕೆ ನಡೆದಿರುವ ಈ ಘಟನೆಯಲ್ಲಿ ಸರಿಸುಮಾರು 60 ವರ್ಷದ ವ್ಯಕ್ತಿಯ ಎರಡೂ ಕಾಲುಗಳು ಕತ್ತರಿಸಿಹೋಗಿವೆ. ವ್ಯಕ್ತಿ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಅವರ ಬಗ್ಗೆ ಇನ್ನಷ್ಟು ವಿವರಗಳು ತಿಳಿದುಬರಬೇಕಿವೆ. ಕೆ.ಸಿ‌. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ | Theft Case: ಮನೆ ಬೀಗವನ್ನೂ ಮುರಿಯಲ್ಲ, ತಿಜೋರಿಗೂ ಕೈ ಹಾಕಲ್ಲ; ಬಾತ್ ರೂಂ ಅಷ್ಟೇ ಈ ಕಳ್ಳರ ಟಾರ್ಗೆಟ್‌!

Exit mobile version