ಬೆಂಗಳೂರು: ಕರ್ನಾಟಕದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಸೇರಿ ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಎರಡು ವಿಮಾನಗಳ (IndiGo Flights) ಎಂಜಿನ್‌ಗಳಲ್ಲಿ ದೋಷ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ಎರಡೂ ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್ (Emergency Landing) ಮಾಡಲಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಎಂಜಿನ್ ದೋಷದ ಹಿನ್ನೆಲೆಯಲ್ಲಿ ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾಗಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ (ಆಗಸ್ಟ್ 29) ತಮಿಳುನಾಡಿನ ಮಧುರೈನಿಂದ ಮಹಾರಾಷ್ಟ್ರದ ಮುಂಬೈಗೆ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇಂಡಿಗೋ ಎ321 ನಿಯೋ ವಿಮಾನದ ಎಂಜಿನ್‌ನಲ್ಲಿ ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಎಂಜಿನ್ 1ರಲ್ಲಿ ತೀವ್ರ ಪ್ರಮಾಣದ ಲೋಪ ಕಾಣಿಸಿಕೊಂಡ ಕಾರಣ ಕೂಡಲೇ ವಿಮಾನವನ್ನು ಮುಂಬೈನಲ್ಲಿಯೇ ತುರ್ತು ಲ್ಯಾಂಡ್ ಮಾಡಲಾಗಿದೆ. ಪೈಲಟ್‌ಗಳ ಚಾಕಚಕ್ಯತೆಯಿಂದಾಗಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ತಿಳಿಸಿದೆ.
ಬೆಂಗಳೂರಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲೂ ಲೋಪ
ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಲ್ಯಾಂಡ್ ಆದ ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಬಂಗಾಳದ ಕೋಲ್ಕೊತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋದ ಮತ್ತೊಂದು ವಿಮಾನದ ಎಂಜಿನ್‌ನಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನದ ಎರಡನೇ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೋಲ್ಕೊತಾದಲ್ಲಿಯೇ ವಿಮಾನವನ್ನು ತುರ್ತು ಲ್ಯಾಂಡ್ ಮಾಡಲಾಗಿದೆ. ಎರಡೂ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೂ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಕಾರಣ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಡಿಜಿಸಿಎ ಮಾಹಿತಿ ನೀಡಿದೆ.
ಇದನ್ನೂ ಓದಿ: Indigo Negligence : ಇಂಡಿಗೋ ವಿಮಾನ ಎಡವಟ್ಟು, ಮಂಗಳೂರಿಗೆ ಬರಬೇಕಿದ್ದ 12 ಪ್ರಯಾಣಿಕರು ಮುಂಬೈನಲ್ಲೇ ಬಾಕಿ!
ತಾಂತ್ರಿಕ ದೋಷದ ಮಾಹಿತಿ ತಿಳಿಯುತ್ತಲೇ ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾಗಿದ್ದರು. ಆದಾಗ್ಯೂ, ವಿಮಾನಗಳ ಪೈಲಟ್‌ಗಳು ಹಾಗೂ ಸಿಬ್ಬಂದಿಯು ಪ್ರಯಾಣಿಕರಿಗೆ ಧೈರ್ಯ ತುಂಬಿದರು. ಇಷ್ಟಾದರೂ, ವಿಮಾನ ಲ್ಯಾಂಡ್ ಆಗುವತನಕ ಪ್ರಯಾಣಿಕರು ಆತಂಕದಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ.