ಮಡಿಕೇರಿ: ತೋಟದಲ್ಲಿ ಕಾಳು ಮೆಣಸು ಕೊಯ್ಯುವಾಗ ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ಸ್ಪರ್ಶಿಸಿ (Electricution) ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಜಿಲ್ಲೆಯ ಬೇರೆ ಬೇರೆ ತೋಟಗಳಲ್ಲಿ ಒಂದೇ ದಿನ ಎರಡು ಘಟನೆಗಳು ಸಂಭವಿಸಿವೆ. ಮೃತಪಟ್ಟವರಿಬ್ಬರೂ ಅಸ್ಸಾಂ ಮೂಲದ ಕಾರ್ಮಿಕರು. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಮತ್ತು ಹುದಿಕೇರಿ ಗ್ರಾಮದಲ್ಲಿ ಈ ಘಟನೆಗಳು ನಡೆದಿವೆ.
ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಅಬ್ರುದ್ದೀನ್(31) ಹಾಗೂ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಕಾರ್ಮಿಕ ಇಸ್ಮಾಯಿಲ್ ಹುಸೇನ್ (33) ಮೃತ ದುರ್ದೈವಿಗಳಾಗಿದ್ದಾರೆ.
ನಾಲ್ಕೇರಿ ಗ್ರಾಮದ ಸ್ಥಳೀಯ ಬೆಳೆಗಾರರ ತೋಟವೊಂದರಲ್ಲಿ ಬೆಳಗೆ 8.30 ಗಂಟೆಯ ವೇಳೆಗೆ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ತಗುಲಿದಾಗ ಆಘಾತಕ್ಕೊಳಗಾದ ಅಬ್ರುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು. ಈ ಘಟನೆ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಹುದಿಕೇರಿ ಹೋಬಳಿಯ ಹೈಸೊಡ್ಲುರೂ ಗ್ರಾಮದ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಇಸ್ಮಾಯಿಲ್ ಹುಸೇನ್(37) ಕರಿ ಮೆಣಸು ಕುಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಏಣಿ ಸ್ಪರ್ಷಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗೋಣಿಕೊಪ್ಪಲಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ವಿರುಪಾಕ್ಷ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.
ಮಾನವೀಯ ಪರಿಹಾರಕ್ಕೆ ಆಗ್ರಹ
ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ಬಳಿಕ ಕೊಡಗು ರೈತ ಸಂಘದ ಪ್ರಮುಖರು ಜಮಾಯಿಸಿ ಚೆಸ್ಕಾಂ ಇಲಾಖೆ ಮೃತ ಕಾರ್ಮಿಕನ ಅಂತ್ಯಸಂಸ್ಕಾರಕ್ಕೆ ಮಾನವೀಯ ಪರಿಹಾರ ನೀಡಬೇಕೆಂದು ಇದೇ ಸಂದರ್ಭ ಚೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.
ಎಲ್ಲಾ ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ತೋಟಗಳ ಒಳಗೆ ಕೆಳ ಮಟ್ಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ಗಳನ್ನು ದುರಸ್ತಿ ಮಾಡಬೇಕು ಎಂದು ಕೊಡಗು ರೈತ ಸಂಘದ ಗೌರವಾಧ್ಯಕ್ಷ ಚಿಮ್ಮಂಗಡ ಗಣೇಶ್ ಒತ್ತಾಯಿಸಿದರು.
ಇದನ್ನೂ ಓದಿ : Electricution death | ಶಿವಮೊಗ್ಗ ಮತ್ತು ಕೊಪ್ಪಳದಲ್ಲಿ ವಿದ್ಯುತ್ ಆಘಾತದಿಂದ ಇಬ್ಬರು ರೈತರು ಮೃತ್ಯುವಶ