ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದಲ್ಲಿ (Mass Murder) ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಶುಕ್ರವಾರ (ಫೆ.24) ರಂದು ನಡೆದಿದ್ದ ಹತ್ಯೆ ಸಂಬಂಧ ಆರೋಪಿಗಳಾಗಿದ್ದ ಶ್ರೀಧರ್ ಭಟ್ ಹಾಗೂ ವಿನಯ್ ಭಟ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯ ಆಸ್ತಿ ವಿಚಾರವಾಗಿ ಗ್ರಾಮದ ನಿವಾಸಿ ಶಂಭು ಭಟ್ ಹಾಗೂ ಶ್ರೀಧರ್ ಭಟ್ ಕುಟುಂಬದ ನಡುವೆ ಗಲಾಟೆ ಉಂಟಾಗಿತ್ತು.
ಇದನ್ನೂ ಓದಿ | Suicide Case: ಬೆಂಗಳೂರಿನಲ್ಲಿ 10 ಅಂತಸ್ತಿನ ಅಪಾರ್ಟ್‌ಮೆಂಟ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ
ಹಿರಿಯ ಮಗ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ಬೆನ್ನಲ್ಲೇ ಆತನ ಪತ್ನಿ ವಿದ್ಯಾ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದರಿಂದ ಸಾಕಷ್ಟು ಬಾರಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಇದಾದ ಬಳಿಕ ಶಂಭು ಭಟ್ಟರು ತಮ್ಮ 6 ಎಕರೆ ಆಸ್ತಿಯಲ್ಲಿ ತಮ್ಮ ಹೆಣ್ಣುಮಕ್ಕಳಿಗೂ ಸೇರಿ ಪಾಲು ಹಂಚಿದ್ದು ವಿದ್ಯಾಳಿಗೆ 1 ಎಕರೆ 9 ಗುಂಟೆ ನೀಡಿದ್ದರು. ಆದರೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ನೀಡಿದ ಕುರಿತು ಪದೇಪದೆ ವಿದ್ಯಾ ಮನೆಯವರು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದ್ದು, ಶುಕ್ರವಾರ ಗಲಾಟೆ ತಾರಕಕ್ಕೇರಿತ್ತು.
ಪರಿಣಾಮ ಶ್ರೀಧರ್ ಭಟ್ ಹಾಗೂ ಅವರ ಮಗ ವಿನಯ ಭಟ್ ಮನೆಯಿಂದ ಮಾರಕಾಸ್ತ್ರ ತಂದು ಶಂಭು ಭಟ್, ಅವರ ಪತ್ನಿ ಮಾದೇವಿ ಭಟ್, ಪುತ್ರ ರಾಘು ಭಟ್ ಹಾಗೂ ಸೊಸೆ ಕುಸುಮಾ ಭಟ್ ಎಂಬುವವರನ್ನು ಮನೆಯ ಆವರಣದಲ್ಲೇ ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಈ ಭೀಕರ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಕುಮ್ಮಕ್ಕಿನಿಂದಲೇ ಕೃತ್ಯ ನಡೆದಿದ್ದಾಗಿ ಶಂಭು ಭಟ್ ಪುತ್ರಿ ಜಯಾ ಅಡಿಗ ಎಂಬುವರು ಮೂವರ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೂ ಓದಿ | ಪ್ರೀತಿಸಿದ ಹುಡುಗಿಗೆ ಮೆಸೇಜ್ ಮಾಡುತ್ತಿದ್ದ ಸ್ನೇಹಿತನನ್ನು ಕೊಂದು, ಖಾಸಗಿ ಅಂಗ ಕತ್ತರಿಸಿದ ಯುವಕ; ಗರ್ಲ್ಫ್ರೆಂಡ್ಗೆ ಫೋಟೋ ಕಳಿಸಿದ!
ನಂತರ ವಿದ್ಯಾಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಉಳಿದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ಶಿವಮೊಗ್ಗ ಬಳಿ ಪತ್ತೆಯಾಗಿದ್ದು, ಅದರಂತೆ ಭಟ್ಕಳ ಡಿವೈಎಸ್ಪಿ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.