ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕು ಕೋನಾಹಿಪ್ಪರಗಿ ಗ್ರಾಮದ ಬಳಿ ನೀರು ಕುಡಿಯಲು ಹೋದಾಗ ನದಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಕೋನಾಹಿಪ್ಪರಗಿ ಗ್ರಾಮದ ರಾಮು ದೊಡ್ಡಮನಿ (12) ಹಾಗೂ ದೇವು ಹೊಸಮನಿ (17) ಮೃತರು. ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.
ಭೀಮಾ ನದಿಗೆ ಕಟ್ಟಲಾಗಿರುವ ಸೇತುವೆ ಬಳಿ ಮೊದಲು ರಾಮು ದೊಡ್ಡಮನಿ ನೀರು ಕುಡಿಯಲು ಹೋಗಿದ್ದಾನೆ. ಇದೇ ವೇಳೆ ಆತನು ಪಾಚಿ ಮೇಲೆ ಕಾಲಿಟ್ಟಿದ್ದು, ಜಾರಿ ನೀರಿಗೆ ಬಿದ್ದಿದ್ದಾನೆ. ರಾಮು ದೊಡ್ಡಮನಿಯನ್ನು ರಕ್ಷಿಸಲು ದೇವು ಹೊಸಮನಿ ನೀರಿಗೆ ಜಿಗಿದಿದ್ದಾನೆ. ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಇಬ್ಬರೂ ಬಾಲಕರ ಶವಗಳನ್ನು ಹೊರತೆಗೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಇಬ್ಬರೂ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆಟೋಗೆ ಗೂಡ್ಸ್ ಲಾರಿ ಡಿಕ್ಕಿ ಯುವತಿ ಸಾವು
ಬೆಂಗಳೂರಿನ ಕೆಂಗೇರಿಯಲ್ಲಿರುವ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಆಟೋಗೆ ಗೂಡ್ಸ್ ಲಾರಿ ಡಿಕ್ಕಿಯಾಗಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಶಾಫಿಯಾ ಬಾನು (22) ಮೃತರು. ಆಟೋ ಚಾಲಕರಾಗಿರುವ ಮೌಸಿನ್ ಖಾನ್ ಅವರು ತಮ್ಮ ಸಂಬಂಧಿಕರನ್ನು ರಾತ್ರಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಆಟೋಗೆ ಗೂಡ್ಸ್ ಲಾರಿ ಡಿಕ್ಕಿಯಾಗಿದೆ.
ಇದನ್ನೂ ಓದಿ: Road accident: ಹೊಸಪೇಟೆ ಬಳಿ ಆಟೋ- ಲಾರಿ ಡಿಕ್ಕಿ: ಆರು ಮಂದಿ ದಾರುಣ ಸಾವು
ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿದ್ದು, ಆಟೋದಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಶಾಫಿಯಾ ಬಾನು ಮೃತಪಟ್ಟಿದ್ದಾರೆ. ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ. ಕುಡಿದ ಮತ್ತಿನಲ್ಲಿ ಗೂಡ್ಸ್ ವಾಹನ ಚಲಾಯಿಸುತ್ತಿದ್ದ ಅರವಿಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.